'ತಮ್ಮ ಬಗ್ಗೆ ಯೋಚಿಸುವ ಸಮಯ ಇದಲ್ಲ'; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯಿಂದ ಯೂಟರ್ನ್ ತೆಗೆದುಕೊಳ್ಳಬೇಕು!

ಸಂಕಷ್ಟದ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರನ್ನು ಬೆಂಬಲಿಸಬೇಕು. ಆಗ ಆಟಗಾರರು ಹೆಚ್ಚುತ್ತಿರುವ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅನುಭವಿ ಕ್ರಿಕೆಟಿಗ ಹೇಳಿದರು.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
Updated on

ಈ ತಿಂಗಳ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೇಶದ ರೆಡ್ ಬಾಲ್ ಕ್ರಿಕೆಟ್ ಅನ್ನು ಉಳಿಸಲು ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹೇಳಿದ್ದಾರೆ. ಜೂನ್ 20 ರಿಂದ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ರೋಹಿತ್ ಮತ್ತು ಕೊಹ್ಲಿ ನಿವೃತ್ತಿಯಿಂದಾಗಿ ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿ ಹಿರಿಯ ಬ್ಯಾಟ್ಸ್‌ಮನ್‌ಗಳು ಇಲ್ಲದಂತಾಗಿದೆ. 67 ವರ್ಷದ ಮಾಜಿ ಕ್ರಿಕೆಟಿಗ, ತಮ್ಮ ಮಗ ಯುವರಾಜ್ ಸಿಂಗ್ ಜೊತೆಗೆ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆಟಗಾರರಿಗೆ ತರಬೇತಿ ನೀಡಿದ್ದು, ಕ್ರಿಕೆಟ್‌ಗೆ ಕೊಹ್ಲಿ ಅವರ ಸೇವೆ ಇನ್ನೂ ಹೆಚ್ಚಿನ ವರ್ಷ ಬೇಕಾಗಿದೆ ಎಂದು ಹೇಳಿದರು.

'ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಉಳಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯಿಂದ ಯೂಟರ್ನ್ ತೆಗೆದುಕೊಳ್ಳಬೇಕು. ಇದು ತಮ್ಮ ಬಗ್ಗೆ ಯೋಚಿಸುವ ಸಮಯವಲ್ಲ. ಇದು ರಾಷ್ಟ್ರ, ಅಭಿಮಾನಿಗಳು ಮತ್ತು ಜನರು ಹೊಂದಿರುವ ಆಳವಾದ ಭಾವನೆಗಳ ಬಗ್ಗೆ ಯೋಚಿಸುವ ಸಮಯ ಇದಾಗಿದೆ. ವಿರಾಟ್ ಅವರು ಇನ್ನೂ ಕನಿಷ್ಠ ಹತ್ತು ವರ್ಷ ಕ್ರಿಕೆಟ್ ಆಡಬಹುದು. ರೋಹಿತ್ ಬಗ್ಗೆ ಹೇಳುವುದಾದರೆ, ಅವರು ನನ್ನ ಬಳಿಗೆ ಬಂದರೆ, ಅವರು ಮತ್ತೆ ಅತ್ಯುತ್ತಮ ಫಿಟ್‌ನೆಸ್‌ಗೆ ಮರಳುವಂತೆ ನಾನು ನೋಡಿಕೊಳ್ಳುತ್ತೇನೆ' ಎಂದು ಯೋಗರಾಜ್ ಮಂಗಳವಾರ ಐಎಎನ್‌ಎಸ್‌ಗೆ ತಿಳಿಸಿದರು.

ಸಂಕಷ್ಟದ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರನ್ನು ಬೆಂಬಲಿಸಬೇಕು. ಆಗ ಆಟಗಾರರು ಹೆಚ್ಚುತ್ತಿರುವ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅನುಭವಿ ಕ್ರಿಕೆಟಿಗ ಹೇಳಿದರು.

'2011ರಲ್ಲಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಆಟಗಾರರನ್ನು ಸಹ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕೈಬಿಡಲಾಯಿತು. ಯುವರಾಜ್ ನಿವೃತ್ತರಾದಾಗ, ನಾನು ಅವರನ್ನು ಗದರಿಸಿದ್ದೆ - ಒತ್ತಡಕ್ಕೆ ಮಣಿಯಬೇಡಿ ಎಂದು ನಾನು ಅವರಿಗೆ ಹೇಳಿದೆ. ಅವರು ಆಗ ಇನ್ನೂ ನಂಬಲಾಗದಷ್ಟು ಫಿಟ್ ಆಗಿದ್ದರು. ಕ್ರಿಕೆಟಿಗರು ಬಾಹ್ಯ ಒತ್ತಡಗಳಿಗೆ ಶರಣಾಗುವ ಬದಲು ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಹೋರಾಡಬೇಕು' ಎಂದರು.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ನಾನು ಕೋಚ್ ಆಗಿದ್ದರೆ, ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಹೊರಗುಳಿಯಲು ಬಿಡುತ್ತಿರಲಿಲ್ಲ: ರವಿಶಾಸ್ತ್ರಿ

'ಬಿಸಿಸಿಐ ಪೋಷಕರಂತೆ ವರ್ತಿಸಬೇಕು. ತಮ್ಮ ಆಟಗಾರರನ್ನು ರಕ್ಷಿಸಬೇಕು ಮತ್ತು ಬೆಂಬಲಿಸಬೇಕು. ಅಹಂ ಅಥವಾ ರಾಜಕೀಯವು ತಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಬಿಡಬಾರದು' ಎಂದು ಅವರು ಹೇಳಿದರು.

ಯೋಗರಾಜ್ ಅವರು ತಮ್ಮ ಮಗ ಯುವರಾಜ್‌ಗೆ ಕರೆ ಮಾಡಿ, ಕೊಹ್ಲಿಗೆ ಸಂದೇಶ ರವಾನಿಸುವಂತೆ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದದಂತೆ ಒತ್ತಾಯಿಸುವಂತೆ ಸಲಹೆ ನೀಡಿದ್ದರು. ಟೆಸ್ಟ್ ಕ್ರಿಕೆಟ್‌ನಿಂದ ಬೇಗನೆ ದೂರ ಸರಿಯುವುದು ಭವಿಷ್ಯದಲ್ಲಿ ವಿಷಾದಕ್ಕೆ ಕಾರಣವಾಗಬಹುದು ಎಂಬುದನ್ನು ಮನವರಿಕೆ ಮಾಡುವಂತೆ ಹೇಳಿದರು.

'ನಾನು ಯುವಿಗೆ ವಿರಾಟ್‌ಗೆ ಕರೆ ಮಾಡಿ 'ನಾನು ಮಾಡಿದ ಅದೇ ತಪ್ಪನ್ನು ಮಾಡಬೇಡಿ' ಎಂದು ಹೇಳಲು ಹೇಳಿದೆ. ಅವರು (ರೋಹಿತ್ ಮತ್ತು ವಿರಾಟ್) ಕೆಲವು ವರ್ಷಗಳ ನಂತರ ಹಿಂತಿರುಗಿ ನೋಡಿ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ ಎಂಬುದು ನನಗೆ ಖಚಿತವಾಗಿದೆ. ಏಕೆಂದರೆ, ಒಂದು ದಿನ ನಿರಾಶೆ ಅನಿವಾರ್ಯವಾಗಿ ಹೊರಹೊಮ್ಮುತ್ತದೆ. ಆದರೆ, ಆಗ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ' ಎಂದರು.

ವಿರಾಟ್ ಕೊಹ್ಲಿ ತಾವು ಆಡಿರುವ 123 ಪಂದ್ಯಗಳಲ್ಲಿ 46.85 ಸರಾಸರಿಯಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳೊಂದಿಗೆ 9,230 ರನ್‌ ಗಳಿಸಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ರೋಹಿತ್ ಶರ್ಮಾ 67 ಪಂದ್ಯಗಳಲ್ಲಿ 4,301 ರನ್‌ಗಳೊಂದಿಗೆ 40.57 ಸರಾಸರಿಯಲ್ಲಿ 12 ಶತಕಗಳು ಮತ್ತು 18 ಅರ್ಧಶತಕ ಬಾರಿಸಿದ್ದಾರೆ. ರೋಹಿತ್ ಕೂಡ ತಮ್ಮ ರೆಡ್-ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆದರು.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
'ಇಂಗ್ಲೆಂಡ್‌ನಲ್ಲಿ ಶತಕ ಗಳಿಸುವುದಾಗಿ ಹೇಳಿದ್ದರು ಆದರೆ...': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಕೋಚ್ ಆಘಾತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com