
ಡೆಲ್ಲಿ ಕ್ಯಾಪಿಟಲ್ಸ್‌ನ (DC) ಸಹ-ಮಾಲೀಕ ಪಾರ್ಥ ಜಿಂದಾಲ್, ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಡಿಸಿ ಪಂದ್ಯವನ್ನು ಮುಂಬೈನಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಐಪಿಎಲ್ 2025ರ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಟ್ಟುಕೊಳ್ಳಲು ಉಭಯ ತಂಡಗಳಿಗೂ ಇದು ಗೆಲ್ಲಲೇಬೇಕಾಗಿರುವ ಪಂದ್ಯವಾಗಿದ್ದು, ಎಂಐ ಮತ್ತು ಡಿಸಿ ಸದ್ಯ ಅಂಕ ಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು 5 ನೇ ಸ್ಥಾನದಲ್ಲಿವೆ. ಈಗಾಗಲೇ ಮೂರು ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದು, ಉಳಿದಿರುವ ನಾಲ್ಕನೇ ಮತ್ತು ಕೊನೆಯ ಸ್ಥಾನಕ್ಕಾಗಿ ಸೆಣಸಲಿವೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕ ಪಾರ್ಥ ಜಿಂದಾಲ್ ಪಂದ್ಯದ ಮುನ್ನಾದಿನದಂದು ಇಮೇಲ್‌ನಲ್ಲಿ ಮುಂಬೈನಲ್ಲಿ ಡಿಸಿ ಮತ್ತು ಎಂಐ ಪಂದ್ಯವು ಮಳೆಯಿಂದ ರದ್ದಾಗುವ ಸಾಧ್ಯತೆಯಿದೆ. ಪಂದ್ಯವನ್ನು ಮುಂಬೈನಿಂದ ಹೊರಗೆ ಬೇರೆಡೆಗೆ ಸ್ಥಳಾಂತರಿಸುವುದು ಲೀಗ್‌ನ ಹಿತದೃಷ್ಟಿಯಿಂದ ಉತ್ತಮ ಎಂದು ಹೇಳಿದ್ದಾರೆ. ಘರ್ಷಣೆಯನ್ನು 'ವರ್ಚುವಲ್ ಕ್ವಾರ್ಟರ್‌ಫೈನಲ್' ಎಂದು ಕರೆದಿದ್ದಾರೆ.
ಅಕ್ಯೂವೆದರ್ ಪ್ರಕಾರ, ಪಂದ್ಯದ ಸಮಯದಲ್ಲಿ ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆ ಶೇ 90ರಷ್ಟಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
'ಮುಂಬೈನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಸ್ಥಿರತೆ ಮತ್ತು ಲೀಗ್‌ನ ಹಿತದೃಷ್ಟಿಯಿಂದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಿರುವಂತೆಯೇ, ನಾಳೆ ನಡೆಯಲಿರುವ ಪಂದ್ಯವನ್ನು ಕೂಡ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ನಾನು ವಿನಂತಿಸುತ್ತೇನೆ. ಏಕೆಂದರೆ 21ರಂದು ಮುಂಬೈನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಕಳೆದ 6 ದಿನಗಳಿಂದ ನಮಗೆ ತಿಳಿದಿದೆ' ಎಂದಿದ್ದಾರೆ.
ಐಪಿಎಲ್ 2025ರಲ್ಲಿ ಕೊನೆ ಕ್ಷಣದ ನಿಯಮ ಬದಲಾವಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೆಕೆಆರ್ ಸಿಇಒ ವೆಂಕಿ ಮೈಸೂರು ಬಿಸಿಸಿಐಗೆ ಪತ್ರ ಬರೆದ ದಿನವೇ ಜಿಂದಾಲ್ ಅವರು ಮೇಲ್ ಮಾಡಿದ್ದಾರೆ. ಮಳೆ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಪಂದ್ಯದ ಅವಧಿಗೆ 60 ಹೆಚ್ಚುವರಿ ನಿಮಿಷಗಳನ್ನು ಸೇರಿಸುವ ಬಿಸಿಸಿಐ ನಿರ್ಧಾರ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನವೇ ಬಂದಿದ್ದರೆ ಆ ಪಂದ್ಯ ರದ್ದಾಗುತ್ತಿರಲಿಲ್ಲ.ಇದರಿಂದ ತಂಡಕ್ಕೆ ಅನ್ಯಾಯವಾಗಿದೆ ಎಂದು ಕೆಕೆಆರ್ ದೂರಿದೆ.
Advertisement