
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ತಂಡದ ಸ್ಟಾರ್ ವೇಗಿ ತಮ್ಮ ಅಲಭ್ಯತೆ ಕುರಿತು ಬಿಸಿಸಿಐಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಹೌದು.. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದ್ದು, ಬಿಸಿಸಿಐ ಮೇ 24 ರ ಶನಿವಾರ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾದ ನಂತರ, ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಹೆಚ್ಚಿನ ಆಟಗಾರರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಹಿರಿಯ ತಂಡದಲ್ಲಿ ಒಂದೆರಡು ಹೊಸ ಮುಖಗಳು ಇಂಗ್ಲೆಂಡ್‌ಗೆ ಪ್ರಯಾಣಿಸಲಿವೆ ಎನ್ನಲಾಗಿದೆ.
ಜೂನ್ 20 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಆಡಲಿದ್ದು, ಈ ಪ್ರಮುಖ ಸರಣಿಯಲ್ಲಿ ಭಾರತದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಂಗ್ಲೆಂಡ್ ವಿರುದ್ಧದ ಸಂಪೂರ್ಣ ಅವಧಿಗೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಲಭ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿದ್ದು, 'ಬುಮ್ರಾ ಎಲ್ಲಾ ಐದು ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಏಕೆಂದರೆ ಬುಮ್ರಾ ತಮ್ಮ ದೇಹದ ಹಾಲಿ ಪರಿಸ್ಥಿತಿ 3 ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ಹೇಳಿದೆ.
"ಜಸ್ಪ್ರೀತ್ ಬುಮ್ರಾ ಈಗಾಗಲೇ ಮಂಡಳಿಗೆ ತಮ್ಮ ದೇಹವು ಮೂರು ಟೆಸ್ಟ್ ಪಂದ್ಯಗಳಿಗಿಂತ ಹೆಚ್ಚಿನ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದರಿಂದ, ಆಯ್ಕೆ ಸಮಿತಿಯು ಇದೇ ರೀತಿಯ ಮತ್ತೋರ್ವ ಬೌಲರ್‌ನೊಂದಿಗೆ ತಂಡ ಪ್ರಕಟಿಸಬೇಕು ಎಂಬ ಸಂದಿಗ್ಧತೆಯಲ್ಲಿದೆ ಎಂದು ತಿಳಿದುಬಂದಿದೆ" ಎಂದು ವರದಿ ತಿಳಿಸಿದೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಐದು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಆಡಿದ್ದರು. ಆದರೆ ಐದನೇ ಮತ್ತು ಕೊನೆಯ ಪಂದ್ಯದ ಸಮಯದಲ್ಲಿ ಭಾರತ ಸರಣಿಯನ್ನು 1-3 ಅಂತರದಿಂದ ಸೋತಿತ್ತು. ಅಂದಿನ ತಂಡದ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಿಂದಾಗಿ ಕೊನೆಯ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ ನಂತರ ಬುಮ್ರಾ ಅವರು ಅಂತಿಮ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.
ಶಮಿ ಕೂಡ ಅಲಭ್ಯ
ಇನ್ನು ಬುಮ್ರಾ ಅವರ ಬೌಲಿಂಗ್ ಪಾಲುದಾರ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಇಂಗ್ಲೆಂಡ್‌ಗೆ ವಿಮಾನ ಹತ್ತುವುದು ಅಸಂಭವವಾಗಿರುವುದರಿಂದ ಇಡೀ ಸರಣಿಗೆ ಬುಮ್ರಾ ಲಭ್ಯವಿಲ್ಲದಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಿದೆ. 34 ವರ್ಷ ವಯಸ್ಸಿನ ಶಮಿ ಪಾದದ ಗಾಯದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ತಂಡದಿಂದ ದೂರು ಉಳಿದಿದ್ದರು. ಫೆಬ್ರವರಿ 2024 ರಲ್ಲಿ ಶಮಿ ಪಾದದ ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಚೇತರಿಸಿಕೊಂಡರು. ಆದರೆ ಅವರ ಬಲ ಮೊಣಕಾಲಿನಲ್ಲಿ ನೋವು ಅನುಭವಿಸಲು ಪ್ರಾರಂಭಿಸಿದರು, ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಣಿಗೆ ಶಮಿಯನ್ನು ಬಿಟ್ಟುಕೊಡುವ ಬಗ್ಗೆ ಆಯ್ಕೆದಾರರು ನಿರ್ಧರಿಸಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ. ಆದಾಗ್ಯೂ, ವೈದ್ಯಕೀಯ ಸಿಬ್ಬಂದಿಯಿಂದ ವರದಿ ಬರದ ಹೊರತು ಭಾರತ ತಂಡಕ್ಕೆ ಶಮಿ ಲಭ್ಯತೆ ಪ್ರಶ್ನೆಯಾಗಿಯೇ ಉಳಿದಿದೆ.
Advertisement