
ಮುಂಬೈ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ದಿಢೀರ್ ನಿವೃತ್ತಿಗೆ ಕೋಟ್ ಗೌತಮ್ ಗಂಭೀರ್ ಅವರೇ ಕಾರಣ ಎಂಬ ಊಹಾಪೋಹಗಳು ವ್ಯಾಪಕವಾಗಿರುವಂತೆಯೇ ಈ ಬಗ್ಗೆ ಇದೇ ಮೊದಲ ಬಾರಿಗೆ ಗೌತಮ್ ಗಂಭೀರ್ ಕೊನೆಗೂ ಮೌನ ಮುರಿದಿದ್ದಾರೆ.
ರೋಹಿತ್ ಶರ್ಮಾ ಬಳಿಕ ವಿರಾಟ್ ಕೊಹ್ಲಿ ಸಹ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಣೆ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವುದೇ ಆಯ್ಕೆದಾರರಿಗೆ ದೊಡ್ಡ ಸವಾಲಾಗಿದೆ. ಇದರ ನಡುವೆ ಕೆಲ ಯುವ ಆಟಗಾರರು ಭಾರತದ ಟೆಸ್ಟ್ ಕ್ರಿಕೆಟ್ನ ಭಾಗವಾಗಲಿದ್ದು, ಇದೇ ವಿಚಾರವಾಗಿ ಕೋಚ್ ಗೌತಮ್ ಗಂಭೀರ್ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಹಿಂದೆ ಆಯ್ಕೆದಾರರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೀಗ ಇದಕ್ಕೆ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕೋಚ್ ಗೌತಮ್ ಗಂಭೀರ್ ಅವರು, 'ನಿವೃತ್ತಿ ಘೋಷಣೆ ಮಾಡುವುದು ಆಟಗಾರರ ವೈಯಕ್ತಿಕ ವಿಷಯ. ಯಾವಾಗ ಕ್ರಿಕೆಟ್ ಆರಂಭ ಮಾಡುತ್ತಿಯಾ ಮತ್ತು ಅದನ್ನು ಯಾವಾಗ ಕೊನೆಗೊಳಿಸುತ್ತಿಯಾ ಎನ್ನುವುದು ತೀರ ವೈಯಕ್ತಿಕವಾದ ವಿಷಯವಾಗಿದೆ. ಅದನ್ನು ಕೇಳುವ ಹಕ್ಕು ಯಾವೊಬ್ಬ ಭಾರತೀಯನಿಗೂ ಇಲ್ಲ. ನಿರ್ಣಯ ಅವರಿಂದಲೇ ಬಂದಿರುತ್ತದೆ. ಅವರ ನಿರ್ಧಾರಕ್ಕೆ ನಾವು ಗೌರವ ಕೊಡಬೇಕು ಎಂದು ಹೇಳಿದ್ದಾರೆ.
ಅಂತೆಯೇ, 'ಇಬ್ಬರು ಹಿರಿಯ ಆಟಗಾರರು ಇಲ್ಲದೇ ಮುಂದುವರೆಯಬೇಕಾಗುತ್ತದೆ. ರೋಹಿತ್ ಹಾಗೂ ಕೊಹ್ಲಿ ಹೆಸರನ್ನು ಉಲ್ಲೇಖಿಸಿದೇ ಮಾತನಾಡಿದ ಗಂಭೀರ್, ಜನರು ಯಾವಾಗ ಬೇಕಾದರೂ ಕೈ ಎತ್ತಬಹುದು. ಅದಕ್ಕೆ ನಾನು ಸಿದ್ಧನಿದ್ದೇನೆ. ಇದು ಕಠಿಣವಾಗಿರುತ್ತದೆ. ಈ ಪ್ರಶ್ನೆಯನ್ನು ಈ ಮೊದಲೇ ಕೇಳಲಾಗಿತ್ತು. ಹಿರಿಯ ಆಟಗಾರರು ಇಲ್ಲದೇ ತಂಡವು ಅನುಭವ ಕಳೆದುಕೊಳ್ಳಬಹುದು. ಆದರೆ ಒಬ್ಬರು ಹೋಗುವುದರಿಂದ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆ. ಆಗ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಅವಕಾಶ ಇರುತ್ತದೆ. ಅದನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು' ಎಂದು ಗಂಭೀರ್ ಹೇಳಿದರು.
ಹಿರಿಯ ಆಟಗಾರರು ಇಲ್ಲದೆಯೂ ಭಾರತ ಯಶಸ್ಸು ಕಾಣುತ್ತದೆ ಎಂದು ಉದಾಹರಣೆ ಸಮೇತ ಹೇಳಿದರು. ಜಸ್ಪ್ರಿತ್ ಬೂಮ್ರಾ ಇಲ್ಲದೆಯೂ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಿತು ಎಂದು ಹೇಳಿದರು. ಇನ್ನು ನಾಳೆ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರರು ಹಾಗೂ ನೂತನ ನಾಯಕನ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆರೋಪ ತಳ್ಳಿ ಹಾಕಿದ ಗಂಭೀರ್
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪವನ್ನು ಭಾರತದ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಳ್ಳಿಹಾಕಿದ್ದಾರೆ.
'ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಟೆಸ್ಟ್‌ಗೆ ನಿವೃತ್ತಿ ಹೊಂದುವಂತೆ ಯಾರೂ ಒತ್ತಾಯ ಮಾಡಿಲ್ಲ. ಯಾರನ್ನೂ ನಿವೃತ್ತಿ ಕೇಳುವ ಹಕ್ಕು ಯಾರಿಗೂ ಇಲ್ಲ. ಇದು ಅವರ ವೈಯಕ್ತಿಕ ನಿರ್ಧಾರವಾಗಿದೆ. ನೀವು ಆಟವನ್ನು ಯಾವಾಗ ಪ್ರಾರಂಭಿಸಬೇಕು ಮತ್ತು ಯಾವಾಗ ಮುಗಿಸಬೇಕು ಎಂಬುದು ವೈಯಕ್ತಿಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಕೋಚ್, ಆಯ್ಕೆದಾರ ಅಥವಾ ಯಾರೇ ಆಗಿರಲಿ, ಯಾವಾಗ ನಿವೃತ್ತಿ ಹೊಂದಬೇಕು ಅಥವಾ ಬೇಡ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಅದು ಅವರವರ ವೈಯಕ್ತಿಕ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.
ನಿವೃತ್ತಿ ವಾಪಸ್ ಗೆ ಪ್ರಯತ್ನ
ಅದಾಗ್ಯೂ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐಯು ನಿವೃತ್ತಿ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳುವಂತೆ ಮನವೊಸಲಿಸುವ ಪ್ರಯತ್ನ ಮಾಡಿತ್ತು. ಆದರೆ, ನಿವೃತ್ತಿ ಘೋಷಣೆ ಮಾಡಿಯೇ ಬಿಟ್ಟರು. ಆಗ ಅದು ಅವರ ವೈಯಕ್ತಿಕ ನಿರ್ಧಾರವಾಗಿದೆ ಎಂದು ಪರಿಗಣಿಸಲಾಯಿತು ಎಂದು ಗೌತಮ್ ಗಂಭೀರ್ ಹೇಳಿದರು.
ಇದೇ ಮೇ 24, 2025ರಂದು ಅಂದರೆ ನಾಳೆ ಭಾರತ ಟೆಸ್ಟ್ ಕ್ರಕೆಟ್‌ಗೆ ಪತ್ರಿಕಾಗೋಷ್ಠಿ ಮೂಲಕ ಬಿಸಿಸಿಐ ಹೊಸ ನಾಯಕನನ್ನು ಘೋಷಿಸಲಿದೆ. ಇದಕ್ಕೂ ಒಂದು ದಿನ ಮುಂಚೆ ಅಂದರೆ ಇಂದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಿವೃತ್ತಿ ವಿಚಾರವಾಗಿ ತಮ್ಮ ಮೇಲೆ ಬಂದಿದ್ದ ಆರೋಪಗಳಿಗೆ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಸ್ಟಾರ್ ಆಟಗಾರರ ದಿಢೀರ್ ನಿವೃತ್ತಿ
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಗುಡ್ ಬೈ ಹೇಳಿದ್ದರು. ಬಳಿಕ ಇತ್ತೀಚೆಗಷ್ಟೇ ಐಪಿಎಲ್ ನಡೆಯುವ ಸಮಯದಲ್ಲೇ ಟೆಸ್ಟ್ ಕ್ರಿಕೆಟ್‌ಗೂ ದಿಢೀರ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅದು ವಿದಾಯ ಪಂದ್ಯವಿಲ್ಲದೆ. ಮೊದಲು ರೋಹಿತ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದು, ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದರು.
Advertisement