ಮುಂದಿನ ಆವೃತ್ತಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ತೊರೆಯುವಂತೆ ಅಭಿಮಾನಿಯೊಬ್ಬರು ಕೇಳಿದ ನಂತರ ರವಿಚಂದ್ರನ್ ಅಶ್ವಿನ್ ತಮ್ಮ ಪ್ರದರ್ಶನ ಉತ್ತಮವಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 9.75 ಕೋಟಿ ರೂ.ಗೆ ಅಶ್ವಿನ್ ಅವರನ್ನು ಸಿಎಸ್‌ಕೆ ಖರೀದಿಸಿತ್ತು. ಅಶ್ವಿನ್, ಒಂಬತ್ತು ಪಂದ್ಯಗಳಲ್ಲಿ ಕೇವಲ ಏಳು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ ಮತ್ತು ಕೇವಲ 33 ರನ್‌ಗಳನ್ನು ಗಳಿಸಿದ್ದಾರೆ. ಸಿಎಸ್‌ಕೆ ಈ ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.
ಯೂಟ್ಯೂಬ್ ಲೈವ್ ಸೆಷನ್ ವೇಳೆ ಅಭಿಮಾನಿಯೊಬ್ಬರು 'ಪ್ರಿಯ ಅಶ್ವಿನ್, ತುಂಬಾ ಪ್ರೀತಿಯಿಂದ ಹೇಳುತ್ತಿದ್ದೇನೆ, ದಯವಿಟ್ಟು ನನ್ನ ಪ್ರೀತಿಯ ಸಿಎಸ್‌ಕೆ ಕುಟುಂಬವನ್ನು ತೊರೆದುಬಿಡಿ' ಎಂದು ಕಮೆಂಟ್ ಮಾಡಿದ್ದಾರೆ.
ಅಶ್ವಿನ್ ಈ ಕಮೆಂಟ್ ಅನ್ನು ನಿರ್ಲಕ್ಷಿಸದೆ, ಈ ಆವೃತ್ತಿಯಲ್ಲಿ ನಾನು ಈ ಹಿಂದೆ ನೀಡಿದ ಉತ್ತಮ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲನಾಗಿದ್ದೇನೆ. ಮುಂದಿನ ಆವೃತ್ತಿಯಲ್ಲಿ ಸುಧಾರಿತ ಪ್ರದರ್ಶನಗಳೊಂದಿಗೆ ಬಲವಾಗಿ ಮರಳುತ್ತೇನೆ. ನಾನು ಕೂಡ ತಂಡಕ್ಕೆ ಉತ್ತಮವಾದದ್ದನ್ನೇ ಬಯಸುತ್ತೇನೆ ಎಂಬುದನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
'ಫ್ರಾಂಚೈಸಿಯ ಮೇಲಿನ ನಿಮ್ಮ ಪ್ರೀತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನೀವು ಏನನ್ನಾದರೂ ಹೇಳುವಾಗ, ದಯವಿಟ್ಟು ಅದನ್ನು ನಿಮ್ಮ ಹಿತದೃಷ್ಟಿಯಿಂದ ಹೇಳುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನನಗೂ ಅದೇ ಪ್ರೀತಿ ಮತ್ತು ಆಸಕ್ತಿ ಇದೆ. ಈ ಅಭಿಯಾನವನ್ನು ವ್ಯರ್ಥ ಮಾಡಲು ನಾನು ಬಿಡುತ್ತೇನೆ ಎಂದು ಭಾವಿಸಬೇಡಿ' ಎಂದು ಅಶ್ವಿನ್ ಉತ್ತರಿಸಿದ್ದಾರೆ.
ಮುಂದುವರಿದು, 'ನನ್ನ ನಿಯಂತ್ರಣದಲ್ಲಿರುವುದನ್ನು ನಾನು ಮಾಡುತ್ತೇನೆ. ನೀವು ನನ್ನ ಕೈಯಲ್ಲಿ ಚೆಂಡನ್ನು ಇಟ್ಟರೆ, ನಾನು ಬೌಲಿಂಗ್ ಮಾಡುತ್ತೇನೆ, ನೀವು ಬ್ಯಾಟ್ ಕೊಟ್ಟರೆ, ನಾನು ಬ್ಯಾಟಿಂಗ್ ಮಾಡುತ್ತೇನೆ. ನಾನು ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದೇನೆ ಮತ್ತು ನಾನು ಕೆಲಸ ಮಾಡಬಹುದಾದ ಕ್ಷೇತ್ರಗಳಿವೆ, ಅದು ನನಗೆ ಸ್ಪಷ್ಟವಾಗಿ ತಿಳಿದಿದೆ. ಪವರ್‌ಪ್ಲೇಯಲ್ಲಿ, ನಾನು ಅನೇಕ ರನ್‌ಗಳನ್ನು ನೀಡಿದ್ದೇನೆ. ಪವರ್‌ಪ್ಲೇಯಲ್ಲಿ ಬೌಲಿಂಗ್ ಮಾಡಲು, ಮುಂದಿನ ವರ್ಷ ಹೆಚ್ಚಿನದನ್ನು ಕಲಿತು ಬರಬೇಕಾಗಿದೆ. ಇದುವೇ ನಾನು ಮಾಡಬಹುದಾದ ಅತ್ಯುತ್ತಮವಾದದ್ದು' ಎಂದು ತಾಳ್ಮೆಯಿಂದ ಹೇಳಿದ್ದಾರೆ.
ಸಿಎಸ್‌ಕೆ ತಂಡವನ್ನು ಅಭಿಮಾನಿಗಳಿಗಿಂತ ಹೆಚ್ಚಾಗಿ ನಾನು ಪ್ರೀತಿಸುತ್ತೇನೆ ಎಂದು ಅಶ್ವಿನ್ ಸೂಚಿಸಿದರು. ಕ್ರಿಕೆಟಿಗನಾಗಿ ತಮ್ಮ ಜೀವನದಲ್ಲಿ ಐಪಿಎಲ್‌ನಲ್ಲಿ ಎಂದಿಗೂ ಇಷ್ಟೊಂದು ನಿರಾಶೆಗೊಂಡಿಲ್ಲ ಎಂದು ಹೇಳಿದರು.
'ನನಗೆ ತಂಡದ ಬಗ್ಗೆ ಕಾಳಜಿ ಇದೆ ಮತ್ತು ನಾನು ನಿಮ್ಮೆಲ್ಲರಿಗಿಂತ ತಂಡವನ್ನು ಹೆಚ್ಚು ಪ್ರೀತಿಸುತ್ತೇನೆ. ನಾನು 2009 ಮತ್ತು 2010 ರಲ್ಲಿ ತಂಡದೊಂದಿಗೆ ಇದ್ದೆ. ನಾನು 7 ವರ್ಷ ತಂಡಕ್ಕಾಗಿ ಆಡಿದ್ದೇನೆ. ಹಿಂದೆ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆದಾಗ ನಾನು ತಂಡದಲ್ಲಿದ್ದೆ. ನಾನು ಪ್ರಶಸ್ತಿಯನ್ನು ಗೆದ್ದಿದ್ದೇನೆ. ಈಗ ಈ ರೀತಿಯಲ್ಲಿ ತಂಡವನ್ನು ನೋಡಿದಾಗ, ನನಗೆ ಇದೇ ಮೊದಲ ಬಾರಿಗೆ ದುಃಖವಾಗುತ್ತದೆ. ಅದಕ್ಕಾಗಿಯೇ ನಾನು ಮೂಲೆಯಲ್ಲಿ ಕುಳಿತು ಅಳುತ್ತಿದ್ದೇನೆ. ಮುಂದೆ ಏನು ಮಾಡಬೇಕು ಎನ್ನುವುದೇ ನನ್ನ ಗುರಿ' ಎಂದು ಅವರು ಹೇಳಿದರು.
Advertisement