
ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ಉತ್ತಮ ಬೌಲಿಂಗ್ ಪ್ರಯತ್ನದ ಹೊರತಾಗಿಯೂ ಮುಂಬೈ ಇಂಡಿಯನ್ಸ್ (MI) ತಂಡದ ಸೂರ್ಯಕುಮಾರ್ ಯಾದವ್ ಏಳು ವಿಕೆಟ್ ನಷ್ಟಕ್ಕೆ 184 ರನ್ ಕೆಲಹಾಕಲು ತಂಡಕ್ಕೆ ನೆರವಾದರು. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಆವೃತ್ತಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿರುವ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಸಚಿನ್ ಐಪಿಎಲ್ 2010ನೇ ಆವೃತ್ತಿವರೆಗೆ 618 ರನ್ ಗಳಿಸಿದ್ದರೆ, ಸೂರ್ಯಕುಮಾರ್ ಅವರು ಈವರೆಗೆ (ಐಪಿಎಲ್ 2025) ಮುಂಬೈ ಪರ 628 ರನ್ ಗಳಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಮುಂಬೈ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ನಾಲ್ಕು ತಂಡಗಳು ಪ್ಲೇಆಫ್ ಸ್ಥಾನ ಪಡೆದಿದ್ದರೂ, ಮೊದಲೆರಡು ಸ್ಥಾನ ಯಾರಿಗೆ ಎನ್ನುವುದು ಕೊನೆಯ ಪಂದ್ಯದ ನಂತರ ತಿಳಿಯಲಿದೆ. ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಮಂಗಳವಾರ ಫಲಿತಾಂಶ ಲಭ್ಯವಾಗಲಿದೆ. ಈಗ ಪಂಜಾಬ್ ಕಿಂಗ್ ಮೊದಲ ಸ್ಥಾನದಲ್ಲಿದ್ದು, ನಂತರ ಎರಡು ಮತ್ತು ಮೂರನೇ ಸ್ಥಾನ ಯಾರಿಗೆ ಎನ್ನುವುದು ತಿಳಿಯಲಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 57 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಆಸರೆಯಾದರು. ರೋಹಿತ್ ಶರ್ಮಾ 24 ಮತ್ತು ರಿಯಾನ್ ರಿಕಲ್ಟನ್ 27 ರನ್ ಗಳಿಸಿದರು.
185 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ಮತ್ತು ಜೋಶ್ ಇಂಗ್ಲಿಸ್ 109 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾದರು. ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 62 ರನ್ ಗಳಿಸಿದರೆ, ಜೋಶ್ ಇಂಗ್ಲಿಸ್ 42 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 73 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ ಅಜೇಯ 26 ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್‌ಗೆ ಗೆಲುವು ತಂದುಕೊಟ್ಟರು.
Advertisement