
ಟೀಂ ಇಂಡಿಯಾದ ಹೊಸ ಟೆಸ್ಟ್ ನಾಯಕ ಶುಭಮನ್ ಗಿಲ್ ನಾರ್ಥಾಂಪ್ಟನ್‌ನಲ್ಲಿ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭಾರತ ಎ ತಂಡವು ಮೇ 30ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಲಿದ್ದು, ಎರಡನೇ ಪಂದ್ಯ ಜೂನ್ 6 ರಂದು ಆರಂಭವಾಗಲಿದೆ. ಗಿಲ್ ಸದ್ಯ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಮುನ್ನಡೆಸುತ್ತಿದ್ದಾರೆ. ಜಿಟಿ ಶುಕ್ರವಾರ ನಡೆಯಲಿರುವ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಆಡಲಿದೆ. ಐಪಿಎಲ್ 2025ರ ಫೈನಲ್ ಜೂನ್ 3ರಂದು ನಡೆಯಲಿದ್ದು, ಜಿಟಿ ಫೈನಲ್‌ಗೆ ಅರ್ಹತೆ ಪಡೆದರೆ, ಎರಡು ದಿನಗಳಲ್ಲಿ ಇಂಗ್ಲೆಂಡ್ ತಲುಪುವುದು ದೊಡ್ಡ ಸವಾಲಾಗಿದೆ ಎನ್ನಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಗಿಲ್‌ಗೆ ವಿಶ್ರಾಂತಿ ನೀಡಲು ಭಾರತ ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.
'ಜೂನ್ 6 ರಂದು ನಾರ್ಥಾಂಪ್ಟನ್‌ನಲ್ಲಿ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಿಂದ ಭಾರತದ ಹೊಸ ಟೆಸ್ಟ್ ನಾಯಕ ಶುಭಮನ್ ಗಿಲ್ ಹೊರಗುಳಿಯುವ ಸಾಧ್ಯತೆಯಿದೆ. ಗಿಲ್ ಸದ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜೂನ್ 3 ರಂದು ಫೈನಲ್ ನಡೆಯಲಿದ್ದು, ಅವರ ತಂಡ ಫೈನಲ್‌ಗೆ ಅರ್ಹತೆ ಪಡೆದರೆ, ಎರಡು ದಿನಗಳಲ್ಲಿ ಇಂಗ್ಲೆಂಡ್ ತಲುಪುವುದು ಕಷ್ಟವಾಗಬಹುದು. ಆದ್ದರಿಂದ 46 ದಿನಗಳ ಪ್ರವಾಸ ಪ್ರಾರಂಭವಾಗುವ ಮೊದಲು ಗಿಲ್ ಅವರಿಗೆ ಸ್ವಲ್ಪ ವಿಶ್ರಾಂತಿ ನೀಡಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ' ಎಂದು ವರದಿ ತಿಳಿಸಿದೆ.
ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಸರಣಿಗೆ ತಂಡವನ್ನು ಮುನ್ನಡೆಸಲು ಸಿದ್ಧರಾಗುತ್ತಿರುವ ಗಿಲ್, ಸಾಮಾನ್ಯ ಅಭ್ಯಾಸ ಪಂದ್ಯಗಳಿಗಿಂತ ಕಾರ್ಯತಂತ್ರದ ಯೋಜನೆಗೆ ಹೆಚ್ಚು ಗಮನಹರಿಸಲು ಮುಂದಾಗಿದ್ದಾರೆ. ನಾಯಕನಾಗಿ ಪ್ರಮುಖ ಪಾತ್ರ ಮತ್ತು ಜವಾಬ್ದಾರಿಗಳಿಗೆ ಅವರು ಎಚ್ಚರಿಕೆಯಿಂದ ಹೆಜ್ಜೆಹಾಕುತ್ತಿದ್ದಾರೆ. ಜೂನ್ 20 ರಂದು ಭಾರತ ಹೆಡಿಂಗ್ಲಿಯಲ್ಲಿ ಮೈದಾನಕ್ಕಿಳಿದಾಗ ಇದು ತಂಡಕ್ಕೆ ಹೇಗೆ ಪ್ರಯೋಜನವಾಗುತ್ತದೆ ಎಂಬುದನ್ನು ಕ್ರಿಕೆಟ್ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಈ ತಿಂಗಳ ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಇದು ಭಾರತದ ಮೊದಲ ದ್ವಿಪಕ್ಷೀಯ ಸರಣಿಯಾಗಲಿದೆ.
ಕೊಹ್ಲಿ ದೀರ್ಘಾವಧಿಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಅವರಂತಹ ಉದಯೋನ್ಮುಖ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ತರಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ನೆಲದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಶದೀಪ್ ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Advertisement