ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗಳನ್ನು ಬುಧವಾರ ಮುಖ್ಯ ಕೋಚ್ ಗೌತಮ್ ಗಂಭೀರ್ ನಿರ್ಲಕ್ಷಿಸಿದ್ದಾರೆ. ಆದರೆ, ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ಗೆ ದೇಶದ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಕ್ಕಾಗಿ ಬಿಸಿಸಿಐ ಅನ್ನು ಶ್ಲಾಘಿಸಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್, ಜೂನ್ 20 ರಂದು ಲೀಡ್ಸ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದು, ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ಲೇ-ಆಫ್‌ಗೆ ಮುನ್ನಡೆಸಿದ ಶ್ರೇಯಸ್ ಅಯ್ಯರ್ ಕುರಿತು ಹೇಳಿದಾಗ 'ನಾನು ಆಯ್ಕೆದಾರನಲ್ಲ' ಎಂದು ಗಂಭೀರ್ ಉತ್ತರಿಸಿದ್ದಾರೆ.
ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯನ್ನು ಹೊಗಳಿದ ಗಂಭೀರ್, 'ಇದೊಂದು ನಂಬಲಾಗದ ನಡೆ' ಎಂದು ಹೇಳಿದರು.
'ಸಾಮಾನ್ಯವಾಗಿ ನಾವು ಬಿಸಿಸಿಐ ಅನ್ನು ಹಲವು ವಿಷಯಗಳ ಬಗ್ಗೆ ಟೀಕಿಸುತ್ತೇವೆ. ಆದರೆ, ಇದು ನಂಬಲಾಗದ ಸಂಗತಿ. ಇಡೀ ರಾಷ್ಟ್ರವು ಒಂದೇ ಮತ್ತು ಸಶಸ್ತ್ರ ಪಡೆಗಳು ಬೇಷರತ್ತಾಗಿ ಮಾಡುವ ಕೆಲಸಕ್ಕೆ ಇಡೀ ರಾಷ್ಟ್ರವು ವಂದಿಸಬೇಕು ಎಂಬ ದೃಷ್ಟಿಕೋನದಿಂದ ಬಿಸಿಸಿಐ ಈ ಕ್ರಮವನ್ನು ತೆಗೆದುಕೊಂಡಿದೆ. ಇಂತಹ ಉಪಕ್ರಮವನ್ನು ತೆಗೆದುಕೊಂಡಿರುವುದರಿಂದ ನಾವು ಬಿಸಿಸಿಐಗೆ ಮತ್ತು ಮುಖ್ಯವಾಗಿ ನಮ್ಮನ್ನು ರಕ್ಷಿಸುತ್ತಿರುವ ನಮ್ಮ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.
ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ, ನೌಕಾ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥರಾದ ಅಮರ್ ಪ್ರೀತ್ ಸಿಂಗ್ ಅವರನ್ನು ಐಪಿಎಲ್ 2025ರ ಆವೃತ್ತಿಯ ಫೈನಲ್ ಪಂದ್ಯಕ್ಕೆ ಆಹ್ವಾನಿಸಲಾಗಿದೆ.
ಆಪರೇಷನ್ ಸಿಂಧೂರದ ಯಶಸ್ಸನ್ನು ಆಚರಿಸಲು ಐಪಿಎಲ್ ಫೈನಲ್‌ಗೆ ಎಲ್ಲ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರು, ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ಸೈನಿಕರಿಗೆ ಆಹ್ವಾನಗಳನ್ನು ನೀಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಿಸಿದ್ದಾರೆ. ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಲಾಯಿತು.
Advertisement