
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಕುರಿತು ಭಾರತದ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮೇ 7 ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಮತ್ತೊಂದೆಡೆ, ಮೇ 12 ರಂದು, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಸ್ಟಾರ್ ಆಟಗಾರರ ಈ ನಿರ್ಧಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಅವರ ಟೆಸ್ಟ್ ನಿವೃತ್ತಿಯ ಕುರಿತು Revsportzನಲ್ಲಿ ಬೋರಿಯಾ ಮಜುಂದಾರ್ ಅವರೊಂದಿಗೆ ಮಾತನಾಡಿದ ಶಾರ್ದೂಲ್ ಠಾಕೂರ್, 'ರೋಹಿತ್ ಮತ್ತು ವಿರಾಟ್ ಇನ್ಮುಂದೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ. ಅವರು ಸದ್ಯ ಈ ಆಟದಲ್ಲಿ ಅತ್ಯಂತ ಹಿರಿಯ ಮತ್ತು ಅನುಭವಿ ವ್ಯಕ್ತಿಗಳಾಗಿದ್ದರು. ಆದರೆ, ಮೊದಲಿನಂತೆಯೇ ಈ ಸ್ವರೂಪದಲ್ಲಿ ಕೊಡುಗೆ ನೀಡಲು ಮತ್ತು ಮುನ್ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ಅರಿತುಕೊಂಡಾಗ ಅದು ವೈಯಕ್ತಿಕ ನಿರ್ಧಾರವಾಗುತ್ತದೆ. ಹಿರಿಯ ಆಟಗಾರರು ಇರುವಾಗ ಹೆಚ್ಚಿನ ರಕ್ಷಣೆ ಇರುತ್ತದೆ. ತಂಡದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರ ಉತ್ತಮ ಮಿಶ್ರಣವನ್ನು ಹೊಂದಿರುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ' ಎಂದು ಹೇಳಿದರು.
'ಈಗಿರುವ ಯುವ ಮತ್ತು ಪ್ರತಿಭಾನ್ವಿತ ತಂಡವು ವಿಭಿನ್ನ ರೀತಿಯ ಉತ್ಸಾಹವನ್ನು ಹೊಂದಿದೆ ಮತ್ತು ಇದು ಎಲ್ಲರಿಗೂ ಸವಾಲಿನ ಆದರೆ, ಶ್ರೀಮಂತ ಪ್ರವಾಸವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಪ್ರೇರಕ ಶಕ್ತಿಗಳ ಅನುಪಸ್ಥಿತಿಯಲ್ಲಿ, ಈಗ ಅತ್ಯಂತ ಅನುಭವಿ ಆಟಗಾರ ಜಡ್ಡು (ರವೀಂದ್ರ ಜಡೇಜಾ) ಎಂದು ನಾನು ಭಾವಿಸುತ್ತೇನೆ. ಒಟ್ಟಾರೆಯಾಗಿ, ಇದು ಎಲ್ಲರಿಗೂ ಆಸಕ್ತಿದಾಯಕ ಪ್ರವಾಸವಾಗಲಿದೆ. ಹೊಸ ನಾಯಕತ್ವ ಸೇರಿದಂತೆ ವಿಭಿನ್ನ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಳ್ಳಲಿದೆ' ಎಂದು ವೇಗದ ಬೌಲರ್ ಹೇಳಿದರು.
67 ಟೆಸ್ಟ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ ನಂತರ ರೋಹಿತ್ ಶರ್ಮಾ ಅವರು ಮೇ 7 ರಂದು ತಮ್ಮ 11 ವರ್ಷಗಳ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಇದು ಜೂನ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತಕ್ಕೆ ನಾಯಕತ್ವದ ದೊಡ್ಡ ಕೊರತೆಯನ್ನುಂಟುಮಾಡಿತು. ಸದ್ಯ ಶುಭಮನ್ ಗಿಲ್ ಅವರಿಗೆ ಟೆಸ್ಟ್ ಕ್ರಿಕೆಟ್ ನಾಯಕತ್ವ ನೀಡಲಾಗಿದ್ದು, ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ.
ರೋಹಿತ್ 2013ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು 67 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರು 40.57 ರ ಸರಾಸರಿಯಲ್ಲಿ 4,301 ರನ್ ಗಳಿಸಿದ್ದಾರೆ. ಈ ಪೈಕಿ 12 ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ.
ವಿರಾಟ್ ಕೊಹ್ಲಿ ಈ ತಿಂಗಳ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 123 ಟೆಸ್ಟ್ ಪಂದ್ಯಗಳ 14 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು. ವಿರಾಟ್ 46.85 ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಈ ಪೈಕಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಈ ಸ್ವರೂಪದಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
Advertisement