

ಹೊಬಾರ್ಟ್: ಮುಂಬರುವ ಆ್ಯಷಸ್ ಸರಣಿಗೆ ಸಿದ್ಧತೆಗಳ ಭಾಗವಾಗಿ ಭಾರತ ವಿರುದ್ಧದ ಉಳಿದ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾದ ಟಿ20 ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಸೋಮವಾರ ಕೈಬಿಡಲಾಗಿದೆ.
31 ವರ್ಷದ ಎಡಗೈ ಬ್ಯಾಟ್ಸ್‌ಮನ್ ಇದೀಗ ಟಿ20 ಬದಲಿಗೆ ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ನತ್ತ ಗಮನ ಹರಿಸಲಿದ್ದು, ನವೆಂಬರ್ 10 ರಿಂದ ಪ್ರಾರಂಭವಾಗುವ ತಾಸ್ಮೇನಿಯಾ ವಿರುದ್ಧದ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅವರು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆಗೆ ದಕ್ಷಿಣ ಆಸ್ಟ್ರೇಲಿಯಾ ಪರ ಆಡಲಿದ್ದಾರೆ. ಇದು ನವೆಂಬರ್ 21 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಆ್ಯಷಸ್ ಟೆಸ್ಟ್‌ಗೆ ತಯಾರಿ ಭಾಗವಾಗಿದೆ.
ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಇದು ಅವರ ಮೊದಲ ಪ್ರಥಮ ದರ್ಜೆ ಪಂದ್ಯವಾಗಿದೆ.
ಕಳೆದ ಒಂದು ತಿಂಗಳಿನಿಂದ ಅವರು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 142 ರನ್ ಗಳಿಸಿದ ನಂತರ ಅವರು T20I ಮತ್ತು ODIಗಳಲ್ಲಿ ಎಂಟು ಇನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಅಭಿಯಾನಕ್ಕೆ ಸಿದ್ಧತೆಗೆ ಆದ್ಯತೆ ನೀಡುವ ಸಲುವಾಗಿ ಆಸ್ಟ್ರೇಲಿಯಾದ T20I ತಂಡದಿಂದ ಹೊರನಡೆದವರ ಪೈಕಿ ಹೆಡ್ ಮೂರನೇ ಸದಸ್ಯರಾಗಿದ್ದಾರೆ.
T20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತವನ್ನು ಎದುರಿಸಿದ್ದ ಜಾಶ್ ಹೇಜಲ್‌ವುಡ್ ಮತ್ತು ಸೀನ್ ಅಬಾಟ್ ಕೂಡ ಇದೀಗ ಸರಣಿಯಿಂದ ಹೊರನಡೆದಿದ್ದಾರೆ. ಈ ಜೋಡಿ ಇದೀಗ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ವಿಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಪರ ಆಡಲಿದೆ.
'ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಆಡಬೇಕೆ ಅಥವಾ ಭಾರತದ ವಿರುದ್ಧದ ಕೊನೆಯ ಎರಡು T20I ಗಳಲ್ಲಿ ಆಡಬೇಕೆ ಎಂಬ ನಿರ್ಧಾರವನ್ನು ಆಯ್ಕೆದಾರರು ಹೆಡ್‌ಗೆ ಬಿಟ್ಟರು. ಆದರೆ, ಅವರು ದೇಶೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಂಡರು' ಎಂದು cricket.com.au ವರದಿ ತಿಳಿಸಿದೆ.
ಮೊದಲ ಆ್ಯಷಸ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡದ ಭಾಗವಾಗುವ ಎಲ್ಲ ಆಟಗಾರರು ಮುಂಬರುವ ಶೆಫೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಎಂದು ವರದಿ ತಿಳಿಸಿದ್ದು, ಇದು ಆ್ಯಷಸ್ ಸರಣಿ ಪ್ರಾರಂಭವಾಗುವ ಮೊದಲು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅಭ್ಯಾಸಕ್ಕೆ ಅವರಿಗೆ ಅನುವು ಮಾಡಿಕೊಡುತ್ತದೆ.
ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೂ ಮೊದಲು, ಟ್ರಾವಿಸ್ ಹೆಡ್ ಶೆಫೀಲ್ಡ್ ಶೀಲ್ಡ್‌ನ ಆರಂಭಿಕ ಸುತ್ತಿನಲ್ಲಿ ಆಡಿದ್ದರು. ಆ ಪಂದ್ಯಾವಳಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20I ಸರಣಿಯು ಮೂರು ಪಂದ್ಯಗಳ ನಂತರ 1-1 ರಲ್ಲಿ ಸಮಬಲ ಸಾಧಿಸಿದೆ. ಕೊನೆಯ ಎರಡು ಪಂದ್ಯಗಳು ಕ್ಯಾರಾರಾ (ನವೆಂಬರ್ 6) ಮತ್ತು ಬ್ರಿಸ್ಬೇನ್ (ನವೆಂಬರ್ 8) ನಲ್ಲಿ ನಡೆಯಲಿವೆ.
Advertisement