

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮಂಡಳಿಯು ತನ್ನ ವಿಚಿತ್ರ ನಿರ್ಧಾರಗಳಿಂದ ಅಚ್ಚರಿ ಮೂಡಿಸುತ್ತಲೇ ಇದೆ. ಮೂರನೇ ಕ್ರಮಾಂಕದಲ್ಲಿನ ಬ್ಯಾಟಿಂಗ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಗೌತಮ್ ಗಂಭೀರ್ ಅವರಿಂದ ತರಬೇತಿ ಪಡೆದ ಭಾರತ ತಂಡವು ಸರಣಿಗೆ ಮೊದಲು ಕರುಣ್ ನಾಯರ್ ಮತ್ತು ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಿತು. ಆದರೆ, ಪ್ರೋಟಿಯಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಯಿತು.
ಕುತೂಹಲಕಾರಿಯಾಗಿ, ಸುದರ್ಶನ್ ತಂಡದ ಭಾಗವಾಗಿದ್ದರು ಆದರೆ ಪ್ಲೇಯಿಂಗ್ XI ನಲ್ಲಿ ಆಯ್ಕೆಯಾಗಲಿಲ್ಲ. ಈ ನಡೆಯು ವ್ಯಾಪಕ ಟೀಕೆಗೆ ಗುರಿಯಾಯಿತು, ಆದರೆ ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಮತ್ತೊಂದು ಅಚ್ಚರಿಯ ಬದಲಾವಣೆ ಮಾಡಿತು. ಸಾಯಿ ಸುದರ್ಶನ್ ಅವರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಲಾಯಿತು ಮತ್ತು ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ, ಭಾರತದ ಮೊದಲ ಇನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು.
ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಈ ಬದಲಾವಣೆಗಳನ್ನು ಟೀಕಿಸಿದ್ದು, ಸದ್ಯದ ಭಾರತೀಯ ಟೆಸ್ಟ್ ತಂಡವನ್ನು ಇದುವರೆಗಿನ ಅತ್ಯಂತ ಗೊಂದಲಮಯ ತಂಡ ಎಂದು ಕರೆದಿದ್ದಾರೆ.
'ಕಳೆದ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಎರಡು ಉತ್ತಮ ಇನಿಂಗ್ಸ್‌ಗಳನ್ನು ಆಡಿದ್ದ ವಾಷಿಂಗ್ಟನ್ ಸುಂದರ್, ಮುಂದಿನ ಟೆಸ್ಟ್‌ನಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಾರೆ. ಹೀಗಾಗಿ, ಇಷ್ಟು ಗೊಂದಲಮಯ ಭಾರತೀಯ ಟೆಸ್ಟ್ ತಂಡವನ್ನು ಎಂದಿಗೂ ನೋಡಿಲ್ಲ' ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ನ 489 ರನ್‌ಗಳಿಗೆ ಉತ್ತರವಾಗಿ ಭಾರತ 201 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಟೆಸ್ಟ್‌ನ ಮೂರನೇ ದಿನವಾದ ಸೋಮವಾರ ಆತಿಥೇಯ ತಂಡ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿತು. ಎರಡನೇ ಸೆಷನ್‌ನಲ್ಲಿ ಭಾರತ 122 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಕೊಂಚ ಪ್ರತಿರೋಧ ತೋರಿ 72 ರನ್ ಜೊತೆಯಾಟವಾಡಿದರು. ಸುಂದರ್ 92 ಎಸೆತಗಳಲ್ಲಿ 48 ರನ್‌ಗಳಿಗೆ ಔಟಾದರು.
ಕೆಎಲ್ ರಾಹುಲ್ (22), ಸಾಯಿ ಸುದರ್ಶನ್ (15), ಧ್ರುವ್ ಜುರೆಲ್ (0), ನಾಯಕ ರಿಷಭ್ ಪಂತ್ (7), ರವೀಂದ್ರ ಜಡೇಜಾ (6) ಮತ್ತು ನಿತೀಶ್ ಕುಮಾರ್ ರೆಡ್ಡಿ (10) ನಿರಾಶಾದಾಯಕವಾಗಿ ಔಟಾದರು.
ವಾಷಿಂಗ್ಟನ್ ಸುಂದರ್ ವಿಕೆಟ್ ನಂತರ, ದಕ್ಷಿಣ ಆಫ್ರಿಕಾ ಉಳಿದ ಎರಡು ಭಾರತೀಯ ವಿಕೆಟ್‌ಗಳನ್ನು ಕಬಳಿಸಿತು. ಆತಿಥೇಯ ತಂಡವನ್ನು 83.5 ಓವರ್‌ಗಳಲ್ಲಿ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಕುಲದೀಪ್ 134 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.
ಮಾರ್ಕೊ ಜಾನ್ಸೆನ್ 48 ರನ್‌ಗಳನ್ನು ನೀಡಿ 6 ವಿಕೆಟ್ ಕಬಳಿಸಿ ಪ್ರಮುಖ ಬೌಲರ್ ಎನಿಸಿಕೊಂಡರೆ, ಸೈಮನ್ ಹಾರ್ಮರ್ 64 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು.
Advertisement