

ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಟೀಂ ಇಂಡಿಯಾದ ನಿರ್ವಹಣೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 30 ರನ್‌ಗಳಿಂದ ಸೋತ ನಂತರ, ಎರಡನೇ ಟೆಸ್ಟ್‌ನಲ್ಲಿಯೂ ಸೋಲಿನ ಸುಳಿಯಲ್ಲಿ ಸಿಲುಕಿದೆ ಮತ್ತು ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲು ಅಚ್ಚರಿಯೇ ನಡೆಯಬೇಕಾಗಿದೆ.
ಇತ್ತೀಚಿನ ಥ್ರೆಡ್ ಪೋಸ್ಟ್‌ನಲ್ಲಿ ವಿಕಾಸ್, ತಂಡದಲ್ಲಿನ ಇತ್ತೀಚಿನ ಬದಲಾವಣೆಗಳು ಮತ್ತು ಅನಗತ್ಯ ಹಸ್ತಕ್ಷೇಪವು ಭಾರತಕ್ಕೆ ಟೆಸ್ಟ್‌ಗಳಲ್ಲಿ ಹೇಗೆ ಹಿನ್ನಡೆ ಉಂಟುಮಾಡುತ್ತಿದೆ ಎನ್ನುವುದರ ಕುರಿತು ಪರೋಕ್ಷವಾಗಿ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಒಂದು ಕಾಲದಲ್ಲಿ ನಾವು ವಿದೇಶಗಳಲ್ಲಿಯೂ ಗೆಲ್ಲಲು ಆಡುತ್ತಿದ್ದೆವು.... ಈಗ ನಾವು ಪಂದ್ಯವನ್ನು ಉಳಿಸಿಕೊಳ್ಳಲು ಆಡುತ್ತಿದ್ದೇವೆ.... ಭಾರತದಲ್ಲಿಯೂ ಸಹ.. ಅನಗತ್ಯವಾದ ವಿಷಯಗಳನ್ನು ಬದಲಾಯಿಸಲು ಮತ್ತು ತಾನು ಬಾಸ್ ಆಗಲು ಪ್ರಯತ್ನಿಸಿದಾಗ ಇಂತಹ ಫಲಿತಾಂಶಗಳು ಸಂಭವಿಸುತ್ತವೆ....' ಎಂದು ವಿಕಾಸ್ ಕೊಹ್ಲಿ ಥ್ರೆಡ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸದ್ಯ ಟೀಂ ಇಂಡಿಯಾ ನಿರ್ವಹಣೆಯಲ್ಲಿ ಕೋಚ್ ಗಂಭೀರ್, ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಮತ್ತು ಟಿ20ಐ ನಾಯಕ ಸೂರ್ಯಕುಮಾರ್ ಕುಮಾರ್ ಸೇರಿದ್ದಾರೆ.
ಗೌತಮ್ ಗಂಭೀರ್ ಅಡಿಯಲ್ಲಿ ಭಾರತದ ಟೆಸ್ಟ್ ಪ್ರದರ್ಶನ ಕುಸಿತ
ಗಂಭೀರ್ ಅವರ ತರಬೇತಿಯಲ್ಲಿ ಭಾರತದ ಟೆಸ್ಟ್ ಪ್ರದರ್ಶನ ಕ್ರಮೇಣ ಕುಸಿತ ಕಂಡಿದೆ. ಅವರ ಅವಧಿಯಲ್ಲಿ ತಂಡವು ಗೆಲುವಿಗಿಂತ ಸೋಲುಗಳನ್ನೇ ಹೆಚ್ಚಾಗಿ ದಾಖಲಿಸಿದೆ. ಟೆಸ್ಟ್ ಕ್ರಿಕೆಟ್‌ನಿಂದ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯಾಗಿದ್ದು, ತಂಡದಲ್ಲಿ ಅನುಭವಿ ನಾಯಕರ ಕೊರತೆ ಎದ್ದು ಕಾಣಿಸುತ್ತಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬ್ಯಾಟಿಂಗ್ ತಂಡವನ್ನು ಬಲಪಡಿಸಿದ ಈ ಇಬ್ಬರು ದಿಗ್ಗಜರ ನಿವೃತ್ತಿ ಬಳಿಕ ತಂಡವು ಅಷ್ಟೇನು ಉತ್ತಮ ಪ್ರದರ್ಶನ ನೀಡಿಯೇ ಇಲ್ಲ.
ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-0 ಅಂತರದ ವೈಟ್‌ವಾಶ್ ಅನುಭವಿಸಿತು. ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದ ಸೋಲು ಅನುಭವಿಸಿತು. ಈ ಅವಧಿಯಲ್ಲಿ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿತು.
ಈಗ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡು ಟೆಸ್ಟ್ ಸರಣಿಯಲ್ಲಿ, ಭಾರತ ಈಗಾಗಲೇ ಸರಣಿಯ ಮೊದಲ ಪಂದ್ಯವನ್ನು ಕಳೆದುಕೊಂಡಿದೆ ಮತ್ತು ತವರಿನಲ್ಲಿ ಮತ್ತೊಂದು ವೈಟ್‌ವಾಶ್ ಆಗುವ ಅಂಚಿನಲ್ಲಿದೆ.
Advertisement