
ದುಬೈನಲ್ಲಿ ನಡೆದ 2025ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಪಂದ್ಯಾವಳಿ ಕೊನೆಗೊಂಡಿದ್ದರೂ, ಪಂದ್ಯದ ಸುತ್ತಲಿನ ಹಲವು ವಿಚಾರಗಳು ಇನ್ನೂ ಸುದ್ದಿಯಲ್ಲಿವೆ. ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ವಿರುದ್ಧ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಔಪಚಾರಿಕವಾಗಿ ದೂರು ದಾಖಲಿಸಲು ಮುಂದಾಗಿದೆ.
ಟೀಂ ಇಂಡಿಯಾ ಗೆಲುವಿನ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಅವರು ಏಷ್ಯಾಕಪ್‌ನ ತಮ್ಮ ಸಂಪೂರ್ಣ ಪಂದ್ಯ ಶುಲ್ಕವನ್ನು ಭಾರತೀಯ ಸೇನೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ಘೋಷಿಸಿದರು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮತ್ತು ಅವರ ತಂಡದ ಸದಸ್ಯರು ತಮ್ಮ ಏಷ್ಯಾ ಕಪ್ ಪಂದ್ಯಾವಳಿಯ ಶುಲ್ಕವನ್ನು ಭಾರತದ ಆಪರೇಷನ್ ಸಿಂಧೂರ ಸಮಯದಲ್ಲಿ ಬಾಧಿತರಾದ 'ನಾಗರಿಕರು ಮತ್ತು ಮಕ್ಕಳಿಗೆ' ದೇಣಿಗೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದರು.
'ಒಂದು ತಂಡವಾಗಿ, ನಾವು ನಮ್ಮ ಪಂದ್ಯ ಶುಲ್ಕವನ್ನು ಭಾರತದ ದಾಳಿಯಿಂದ ಬಾಧಿತರಾದ ನಾಗರಿಕರು ಮತ್ತು ಮಕ್ಕಳಿಗೆ ದೇಣಿಗೆ ನೀಡಲು ನಿರ್ಧರಿಸಿದ್ದೇವೆ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಆಘಾ ಹೇಳಿದರು.
ದೈನಿಕ್ ಜಾಗರಣ್ ಪ್ರಕಾರ, ಬಿಸಿಸಿಐ ಆಘಾ ಅವರ ಮಾತುಗಳನ್ನು ಕ್ರಿಕೆಟ್ ಮತ್ತು ರಾಜಕೀಯದ ನಡುವಿನ ಗೆರೆಯನ್ನು ದಾಟಿರುವಂತೆ ನೋಡಿದ್ದು, ವಿಶೇಷವಾಗಿ ಅವರು 'ನಾಗರಿಕರು ಮತ್ತು ಮಕ್ಕಳು' ಎಂದು ಉಲ್ಲೇಖಿಸಿರುವುದರಿಂದ. ಈ ಹೇಳಿಕೆ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಮತ್ತು ದೊಡ್ಡ ಸಮಸ್ಯೆಯಾಗಿ ಬೆಳೆಯುವ ಅಪಾಯವಿದೆ ಎಂದು ಮೂಲವೊಂದು ಸೂಚಿಸಿದೆ. ಮಂಡಳಿಯು ಈಗ ಅಧಿಕೃತ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದು, ಇದು ಆಘಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.
ಎಸಿಸಿ ಅಧ್ಯಕ್ಷ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತದ ಆಟಗಾರರು ನಿರಾಕರಿಸಿದಾಗ ಕಾರ್ಯಕ್ರಮವು ಅಸ್ತವ್ಯಸ್ತವಾಯಿತು. ನಂತರ ನಖ್ವಿ ತಮ್ಮ ಪರಿವಾರದೊಂದಿಗೆ ಟ್ರೋಫಿ ಮತ್ತು ಅಧಿಕೃತ ಪದಕಗಳನ್ನು ತೆಗೆದುಕೊಂಡು ಹೊರಟುಹೋದರು. ಆದಾಗ್ಯೂ, ಭಾರತವು ಸಂಭ್ರಮಾಚರಣೆಯನ್ನು ನಿಲ್ಲಿಸಲಿಲ್ಲ. ಕಾಲ್ಪನಿಕ ಟ್ರೋಫಿಯೊಂದಿಗೆ ತಂಡವು ಪೋಸ್ ನೀಡಿತು.
ನಂತರ ಆಘಾ ನಖ್ವಿಯವರ ಕ್ರಮಗಳನ್ನು ಸಮರ್ಥಿಸಿಕೊಂಡು, 'ನೀವು ಎಸಿಸಿ ಅಧ್ಯಕ್ಷರಿಂದ ಟ್ರೋಫಿಯನ್ನು ಸ್ವೀಕರಿಸದಿದ್ದರೆ, ನೀವು ಅದನ್ನು ಹೇಗೆ ಪಡೆಯುತ್ತೀರಿ?. ಈ ಟೂರ್ನಮೆಂಟ್‌ನಲ್ಲಿ ಭಾರತ ಮಾಡಿರುವುದು ತುಂಬಾ ನಿರಾಶಾದಾಯಕವಾಗಿದೆ. ಅವರು ಕೈಕುಲುಕದೆ ನಮಗೆ ಅಗೌರವ ತೋರಿಸುತ್ತಿಲ್ಲ ಬದಲಿಗೆ, ಕ್ರಿಕೆಟ್‌ಗೆ ಅಗೌರವ ತೋರಿಸುತ್ತಿದ್ದಾರೆ' ಎಂದರು.
Advertisement