
ನವದೆಹಲಿ: ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮಂಗಳವಾರ ದಕ್ಷಿಣ ಆಫ್ರಿಕಾ ಎ ವಿರುದ್ಧದ ರೆಡ್-ಬಾಲ್ ಸರಣಿಗೆ ಭಾರತ ಎ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಜುಲೈನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೇಳೆ ಪಂತ್ ಅವರ ಕಾಲಿಗೆ ಗಾಯವಾಗಿತ್ತು. ಅಕ್ಟೋಬರ್ 30 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಎರಡೂ ಪಂದ್ಯಗಳಿಗೆ ಪಂತ್ ಅವರನ್ನು ಇಂಡಿಯಾ ಎ ತಂಡಕ್ಕೆ ಆಯ್ಕೆ ಮಾಡಿರುವುದರಿಂದ ಅವರು ಅಕ್ಟೋಬರ್ 25 ರಿಂದ 2025-26ರ ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ದೆಹಲಿ ಪರ ಆಡುವುದಿಲ್ಲ.
ಪಂತ್ ಮತ್ತು ಉಪನಾಯಕ ಬಿ ಸಾಯಿ ಸುದರ್ಶನ್ ಎರಡೂ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಆದರೆ ಕೆಎಲ್ ರಾಹುಲ್, ಧ್ರುವ್ ಜುರೆಲ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಆಟಗಾರರು ನವೆಂಬರ್ 6 ರಿಂದ ಪ್ರಾರಂಭವಾಗಲಿರುವ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಮಾತ್ರ ಭಾಗವಹಿಸಲಿದ್ದಾರೆ. ನವೆಂಬರ್ 14 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಸರಣಿಗೆ ಭಾರತದ ಟೆಸ್ಟ್ ತಂಡದಲ್ಲಿ ಇವರೆಲ್ಲರೂ ಸ್ಥಾನ ಪಡೆಯುವ ಸಾಧ್ಯತೆಯಿದೆ.
ನವೆಂಬರ್ 6 ರಿಂದ ಪ್ರಾರಂಭವಾಗುವ ಎರಡನೇ ಪಂದ್ಯಕ್ಕೆ ಭಾರತದ ನಿಯಮಿತ ಆಟಗಾರರಾದ ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಧ್ರುವ್ ಜುರೆಲ್ ತಂಡದಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ಟೆಸ್ಟ್ ಕ್ರಿಕೆಟ್ ಆಡದ ಆಕಾಶ್ ದೀಪ್ ಎರಡನೇ ಟೆಸ್ಟ್‌ಗೆ ಲಭ್ಯರಿದ್ದಾರೆ. ಇದು ನವೆಂಬರ್ 6 ರಿಂದ 9 ರವರೆಗೆ ನಡೆಯಲಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು, ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಜತ್ ಪಾಟೀದಾರ್ (ಮಧ್ಯಪ್ರದೇಶದ ನಾಯಕ), ರುತುರಾಜ್ ಗಾಯಕ್ವಾಡ್, ಅಭಿಮನ್ಯು ಈಶ್ವರನ್ (ಬಂಗಾಳದ ನಾಯಕ) ಮತ್ತು ಆಕಾಶ್ ದೀಪ್ ಸೇರಿದಂತೆ ಇತರರು ಎರಡು ಪಂದ್ಯಗಳಲ್ಲಿ ಒಂದಕ್ಕೆ ಮಾತ್ರ ತಂಡದ ಭಾಗವಾಗುವಂತೆ ಮಾಡಿದೆ. ಈಮಧ್ಯೆ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಎನ್ ಜಗದೀಶನ್, ಮಾನವ್ ಸುತಾರ್, ಸಾರಾಂಶ್ ಜೈನ್ ಮತ್ತು ಹರ್ಷ್ ದುಬೆ ಅವರಂತಹ ಆಟಗಾರರನ್ನು ಆಯ್ಕೆ ಮಾಡಿದೆ.
ದಕ್ಷಿಣ ಆಫ್ರಿಕಾದ 'ಎ' ತಂಡವನ್ನು ಬ್ಯಾಟ್ಸ್‌ಮನ್ ಮಾರ್ಕ್ವೆಸ್ ಅಕೆರ್ಮನ್ ಮುನ್ನಡೆಸಲಿದ್ದು, ತಂಡದ ಹಿರಿಯ ನಾಯಕ ತೆಂಬಾ ಬವುಮಾ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಲಿದ್ದಾರೆ.
ಪಂತ್ ಅವರ ಫಾರ್ಮ್ ಮತ್ತು ಫಿಟ್ನೆಸ್ ಉತ್ತಮವಾಗಿದೆ ಎನಿಸಿದರೆ, ನವೆಂಬರ್ 14 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ.
ಮೊದಲ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ತಂಡ
ರಿಷಬ್ ಪಂತ್ (ನಾಯಕ) (ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಎನ್ ಜಗದೀಶನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸಾರಾಂಶ್ ಜೈನ್, ಗುರ್ನೂರ್ ಬ್ರಾರ್, ಖಲೀಲ್ ಅಹ್ಮದ್.
ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ತಂಡ
ರಿಷಭ್ ಪಂತ್ (ನಾಯಕ) (ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪ ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್‌ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್
Advertisement