
ಏಷ್ಯಾ ಕಪ್ 2025ರ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯುವ ಸ್ಪಿನ್ನರ್ ದುನೀತ್ ವೆಲ್ಲಾಲ ಅವರಿಗೆ ಪಿತೃ ವಿಯೋಗವಾಗಿದೆ. ಸೆಪ್ಟೆಂಬರ್ 18 ರಂದು ಗ್ರೂಪ್ ಹಂತದ ಪಂದ್ಯದಲ್ಲಿ ದುನೀತ್ ಅವರು ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದ್ದಾಗ, ಅವರ ತಂದೆ ಹೃದಯಾಘಾತದಿಂದ ನಿಧನರಾಗಿರುವ ವಿಚಾರ ತಿಳಿದಿದೆ. ಆದರೆ, ಪಂದ್ಯ ಮುಗಿದ ನಂತರವೇ ಅವರಿಗೆ ಮುಖ್ಯ ಕೋಚ್ ಸನತ್ ಜಯಸೂರ್ಯ ಮತ್ತು ತಂಡದ ವ್ಯವಸ್ಥಾಪಕರು ದುರಂತದ ಮಾಹಿತಿ ನೀಡಿದರು. ದುನೀತ್ ತನ್ನ ತಂದೆಗೆ ಅಂತಿಮ ನಮನ ಸಲ್ಲಿಸಲು ಮನೆಗೆ ಮರಳಿದರು. ಆದರೆ, ಸೂಪರ್ ಫೋರ್‌ಗಾಗಿ ಯುಎಇಗೆ ಹಿಂತಿರುಗಿದರು.
ಶುಕ್ರವಾರ, ಶ್ರೀಲಂಕಾ ತಂಡವು ಟೂರ್ನಿಯ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣಸಿತು ಮತ್ತು ಸೂಪರ್ ಓವರ್‌ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ದುನೀತ್ ಅವರಿಗೆ ಸಾಂತ್ವನ ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂರ್ಯ ದುನೀತ್ ಕಡೆಗೆ ನಡೆದು ದುಃಖಿತ ಕ್ರಿಕೆಟಿಗನನ್ನು ಪ್ರೇರೇಪಿಸುತ್ತಿರುವುದು ಕಂಡುಬಂದಿದೆ. ದುನೀತ್ ಅವರ ಕಠಿಣ ಪರಿಸ್ಥಿತಿಯಲ್ಲಿ ಸೂರ್ಯ ಅವರಿಗೆ ಧೈರ್ಯ ಹೇಳಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೀಲಂಕಾದ ಸ್ಪಿನ್ನರ್ ಕೂಡ ತಲೆಯಾಡಿಸಿ ಮತ್ತು ನಗುತ್ತಾ ಅವರ ಮಾತುಗಳನ್ನು ಕೇಳುತ್ತಾ, ಪ್ರತಿಕ್ರಿಯಿಸಿದ್ದಾರೆ. ಈ ಕ್ಷಣ ಎಲ್ಲ ಅಭಿಮಾನಿಗಳು ಸೂರ್ಯ ನಡೆಯನ್ನು ಶ್ಲಾಘಿಸಿದರು ಮತ್ತು ಪ್ರಭಾವಿತರಾದರು.
ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಮಾಡಿದ ಭಾರತ, ಅಭಿಷೇಕ್ ಶರ್ಮಾ ಅವರ ಮೂರನೇ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್ ಗಳಿಸಿತು. ಭಾರತ ನೀಡಿದ 203 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ಪಾಥುಮ್ ನಿಸ್ಸಂಕಾ ಅವರ ಅಮೋಘ ಶತಕ ದಾಖಲಿಸಿದರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಶುಕ್ರವಾರ ದುಬೈನಲ್ಲಿ ನಡೆದ 'ಸೂಪರ್ ಓವರ್'ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಅರ್ಶ್‌ದೀಪ್ ಸಿಂಗ್ ತಮ್ಮ ಅದ್ಭುತ ಬೌಲಿಂಗ್‌ನಿಂದ ತಂಡದ ಗೆಲುವಿಗೆ ಕಾರಣರಾದರು.
ಸೂಪರ್ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ, ಐದು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ನಾಯಕ ಸೂರ್ಯಕುಮಾರ್ ಯಾದವ್ ಒಂದೇ ಎಸೆತದಲ್ಲಿ ಮೂರು ರನ್‌ಗಳ ಗುರಿಯನ್ನು ಸಾಧಿಸಿದರು.
Advertisement