
ನವದೆಹಲಿ: ತಮ್ಮಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು, ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು, ಇದರ ವಿರುದ್ಧ ಐಸಿಸಿಗೆ ದೂರು ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದರಿಂದ ಕೋಪಗೊಂಡ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ತಮ್ಮ ಹೋಟೆಲ್ ಗೆ ತೆಗೆದುಕೊಂಡು ಹೋದರು. ಈ ಮಾಹಿತಿಯನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಂಚಿಕೊಂಡಿದ್ದಾರೆ.
ಏಷ್ಯಾ ಕಪ್ ಟ್ರೋಫಿಯನ್ನು ನಿರಾಕರಿಸಿರುವ ಭಾರತೀಯ ತಂಡದ ನಿಲುವನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಸಮರ್ಥಿಸಿಕೊಂಡಿದ್ದು, ನಮ್ಮ ವಿರುದ್ಧ ಯುದ್ಧ ನಡೆಸುತ್ತಿರುವ ವ್ಯಕ್ತಿಯಿಂದ ಭಾರತ ಟ್ರೋಫಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಂದ್ಯ ಗೆದ್ದು ಭಾರತ ತಂಡ ಚಾಂಪಿಯನ್ ಆಗಿದ್ದು, ಟ್ರೋಫಿ ಪಡೆಯಲು ಅರ್ಹವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಏಷ್ಯಾ ಕಪ್ ಅನ್ನು ಆಯೋಜಿಸುವುದಿಲ್ಲ. ಅದರ ಜವಾಬ್ದಾರಿ ಸಂಪೂರ್ಣವಾಗಿ ಏಷ್ಯನ್ ಕ್ರಿಕೆಟ್ ಮಂಡಳಿಯ ಮೇಲಿದೆ. ಟ್ರೋಫಿ ಪಾಕಿಸ್ತಾನ ಮಂಡಳಿಯ ಆಸ್ತಿಯಲ್ಲ, ಅದನ್ನು ನಖ್ವಿ ತಮ್ಮೊಂದಿಗೆ ತೆಗೆದುಕೊಂಡು ಹೋದರು. ಟ್ರೋಫಿಯನ್ನು ಯಾರಿಂದ ಪಡೆಯಬೇಕೆಂಬುದನ್ನು ಭಾರತೀಯ ತಂಡದ ಆಟಗಾರರು ಮತ್ತು ಬಿಸಿಸಿಐ ನಿರ್ಧರಿಸುತ್ತದೆ. ಏಷ್ಯಾ ಕಪ್ ಚಾಂಪಿಯನ್ ಆಗಿ, ಭಾರತ ತಂಡವು ಟ್ರೋಫಿಯನ್ನು ಪಡೆಯುತ್ತದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಭಾರತವು ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ, ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿದೆ. ಇದು ದೇಶಕ್ಕೆ ಒಂದು ದೊಡ್ಡ ಗೆಲುವು ಮತ್ತು ದೊಡ್ಡ ಸಾಧನೆಯಾಗಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನವನ್ನು ಒಳಗೊಂಡ ಪಂದ್ಯಾವಳಿಯಲ್ಲಿ ಭಾರತ ಭಾಗವಹಿಸುವಿಕೆಯ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಟೀಕೆಗಳ ನಡುವೆ, ಬಿಸಿಸಿಐ ಸರ್ಕಾರಿ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದೆ.
ಏಷ್ಯಾ ಕಪ್‌ನಂತಹ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ, ಅನೇಕ ದೇಶಗಳು ಭಾಗಿಯಾಗಿವೆ, ಹೀಗಾಗಿ ಭಾರತೀಯ ತಂಡಗಳು ಭಾಗವಹಿಸಬೇಕಿದೆ. ಇಲ್ಲದಿದ್ದರೆ, ಇದು ನಮ್ಮ ಇತರ ಪಂದ್ಯಗಳು ಪರಿಣಾಮ ಬೀರುತ್ತವೆ, ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಫೆಡರೇಶನ್ ನಿಷೇಧಿಸಲ್ಪಡುತ್ತದೆ. ಆದ್ದರಿಂದ ನಾವು ಕೇಂದ್ರ ಸರ್ಕಾರದ ನೀತಿಯನ್ನು ಅನುಸರಿಸಿದ್ದೇವೆ. ಕೆಲವು ಭಾಗಗಳಿಂದ ಕೆಲವು ಪ್ರತಿಭಟನೆಗಳ ಹೊರತಾಗಿಯೂ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇವೆ.
ಪಾಕಿಸ್ತಾನ ವಿರುದ್ಧ ಭಾರತ 3-0 ಅಂತರದ ಅದ್ಭುತ ಗೆಲುವು ದಾಖಲಿಸಿದೆ, ನಮ್ಮ ಜನರಿಗೆ ಸಂತಸವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ದೇಶವು ನಿಜವಾಗಿಯೂ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ವರ್ತನೆ ವಿರುದ್ಧ ಪ್ರತಿಭಟಿಸಲು ಬಿಸಿಸಿಐ ನಿರ್ಧರಿಸಿದೆ.
ಈ ಪಂದ್ಯಾವಳಿಯಲ್ಲಿ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸದಂತೆ ಐಸಿಸಿ ಈ ಹಿಂದೆಯೇ ಎರಡೂ ತಂಡಗಳ ಆಟಗಾರರಿಗೆ ಎಚ್ಚರಿಕೆ ನೀಡಿತ್ತು.
ಇದೀಗ ಮೊಹ್ಸಿನ್ ನಖ್ವಿ ವರ್ತನೆ ಉನ್ನತ ಹುದ್ದೆಗಳಲ್ಲಿ ಮುಂದುವರಿಯುವಲ್ಲಿ ಅವರಿಗೆ ಸಮಸ್ಯೆಗಳನ್ನು ಎದುರು ಮಾಡಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಂಡಳಿಯ ಹಲವಾರು ಹುದ್ದೆಗಳಿಂದ ತೆಗೆದುಹಾಕಬಹುದು ಅಥವಾ ನಿಷೇಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement