

ಮುಂಬೈ: ಮುಂಬೈ ನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಮುಂಬೈಗೆ ಗೆಲ್ಲಲು 241 ರನ್ ಗಳ ಬೃಹತ್ ಗುರಿ ನೀಡಿತ್ತು.
ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು ಆರು ಬೌಂಡರಿ ಸಹಿತ 78 ರನ್ ಕಲೆಹಾಕಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದು ಬದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಬಳಿಕ ನಾಯಕ ರಜತ್ ಪಾಟಿದಾರ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಈ ಹಂತದಲ್ಲಿ 38 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅರ್ಧಶತಕ (50 ರನ್) ಗಳಿಸಿ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಬೃಹತ್ ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡ, ರಯಾನ್ ರಿಕಲ್ಟನ್ 22 ಎಸೆತಗಳಲ್ಲಿ 37 ರನ್ ಗಳಿಸಿದರೆ, ರೋಹಿತ್ ಶರ್ಮಾ 13 ಎಸೆತಗಳಲ್ಲಿ 19 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರು. ಬಳಿಕ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 33 ರನ್ ಗಳಿಸಿದರಾದರೂ ತಿಲಕ್ ವರ್ಮಾ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿದರೆ, ಶೆರ್ಫೇನ್ ರುದರ್ಫೋರ್ಡ್ 31 ಎಸೆತಗಳಲ್ಲಿ 71 ರನ್ ಗಳಿಸಿದರೂ ಏಕಾಂಗಿ ಹೋರಾಟ ಫಲಿಸಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ ಮುಂಬೈ ತಂಡ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಸೋಲೊಪ್ಪಿಕೊಂಡಿತು.
Advertisement