ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಡಿಜೆ ಹಾಡು ಆಯ್ಕೆ ಮತ್ತು ಕಾಮೆಂಟ್‌ಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ದೂರು ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ದಕ್ಷಿಣ ಭಾರತದ ಸ್ಟೀರಿಯೊಟೈಪ್‌ಗಳ ಬಗ್ಗೆ ಮೀಮ್‌ಗಳೊಂದಿಗೆ ಹೆಚ್ಚಾಗಿ ಬಳಸಲಾಗುವ ವೈರಲ್ ಹಾಡಾದ 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ' ಹಾಡನ್ನು ಪಂದ್ಯದ ಸಮಯದಲ್ಲಿ ಹಾಕುವುದು 'ಒಳ್ಳೆಯ ಅಭಿರುಚಿಯಲ್ಲ' ಎಂದು ಸಿಎಸ್‌ಕೆ ತಮ್ಮ ದೂರಿನಲ್ಲಿ ತಿಳಿಸಿದೆ. ಐಪಿಎಲ್‌ನ ಉನ್ನತ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಆಡಳಿತ ಮಂಡಳಿಯು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು.
'ನಮಗೆ ಸಿಎಸ್‌ಕೆಯಿಂದ ದೂರು ಬಂದಿದೆ ಮತ್ತು ಅದನ್ನು ಪರಿಶೀಲಿಸುತ್ತಿದ್ದೇವೆ' ಎಂದು ಅಧಿಕಾರಿ ಹೇಳಿದರು.
ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
'ಸಾಮಾನ್ಯವಾಗಿ ಡಿಜೆಗಳು ತವರು ತಂಡವನ್ನು ಬೆಂಬಲಿಸಲು ಇರುತ್ತಾರೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ನಮ್ಮ ಆಟಗಾರರ ವಿರುದ್ಧ ಕೆಲವು ಟೀಕೆಗಳನ್ನು ಮಾಡಲಾಗಿತ್ತು. ಇದನ್ನು ಪರಿಗಣಿಸಿ, ನಾವು ಅದನ್ನು ಪರಿಶೀಲಿಸಲು ಬಿಸಿಸಿಐಗೆ ಪತ್ರ ಬರೆದಿದ್ದೇವೆ' ಎಂದರು.
ಸಂಗೀತ ನಿರ್ದೇಶಕ ಗಾನ ಅಪ್ಪು ಸಂಯೋಜಿಸಿರುವ ಈ ಹಾಡನ್ನು ಸಿಎಸ್‌ಕೆ-ಆರ್‌ಸಿಬಿ ಪೈಪೋಟಿಯೊಂದಿಗೆ ದೀರ್ಘ ಸಂಬಂಧ ಹೊಂದಿದೆ. ಏಕೆಂದರೆ, ಅಭಿಮಾನಿಗಳು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕಳೆದ ವರ್ಷ, ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಜಿತೇಶ್ ಶರ್ಮಾ ಈ ಹಾಡನ್ನು ಹಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಬಳಿಕ ಜಿತೇಶ್ ವಿರುದ್ಧ ಸಿಎಸ್‌ಕೆ ಅಭಿಮಾನಿಗಳು ಕಿಡಿಕಾರಿದ್ದರು.
'ಆ ಘಟನೆಯ ನಂತರ, ಅದು ಪುನರಾವರ್ತನೆಯಾಗಿಲ್ಲ. ಡಿಜೆ ಎದುರಾಳಿ ಆಟಗಾರರ ಬಗ್ಗೆ ಯಾವುದೇ ಕಾಮೆಂಟ್ ಮಾಡಬಾರದು. ಇದಲ್ಲದೆ, ನಮ್ಮನ್ನು ಹುರಿದುಂಬಿಸುವ ಸುಂದರ ಅಭಿಮಾನಿ ಬಳಗವನ್ನು ಹೊಂದಿರುವುದು ನಮ್ಮ ಅದೃಷ್ಟ' ಎಂದು ವಿಶ್ವನಾಥನ್ ಹೇಳಿದರು.
ಆರ್‌ಸಿಬಿ ಪಂದ್ಯದ ವೇಳೆ ತಮ್ಮ ಆಟಗಾರರನ್ನು ಔಟ್ ಮಾಡಿದ ನಂತರ ಡಿಜೆ ಮಾಡಿದ ಕಾಮೆಂಟ್‌ಗಳಿಂದ ಸಿಎಸ್‌ಕೆ ತಂಡದ ಆಡಳಿತ ಮಂಡಳಿ ಕೂಡ ಸಂತೋಷವಾಗಿರಲಿಲ್ಲ. 'ಅವರು ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸಲು ಅಥವಾ ಅವರನ್ನು ಅವಮಾನಿಸಲು ಸಾಧ್ಯವಿಲ್ಲ' ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸಿಎಸ್‌ಕೆ ಸದ್ಯ ಆಡಿರುವ 5 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು 4 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
Advertisement