ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2026ರ ಅಭಿಯಾನದಲ್ಲಿ ಸತತ ಸೋಲುಗಳ ಬಳಿಕ ಎರಡು ಗೆಲುವುಗಳ ಮೂಲಕ ಹಳಿಗೆ ಮರಳಿದ್ದ ತಂಡಕ್ಕೆ ಇದೀಗ ಟೂರ್ನಿಯ ಮಧ್ಯದಲ್ಲೇ ಮತ್ತೆ ಸಂಕಷ್ಟ ಎದುರಾಗಿದೆ. ಸಿಎಸ್‌ಕೆ ಪರ ಅಧಿಕ ರನ್ ಕಲೆಹಾಕಿದ್ದ ಯುವ ಬ್ಯಾಟಿಂಗ್ ಸೆನ್ಸೇಷನ್ ಆಯುಷ್ ಮ್ಹಾತ್ರೆ ಇದೀಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಸಿಎಸ್‌ಕೆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ 18 ವರ್ಷದ ಆರಂಭಿಕ ಆಟಗಾರ ಗಾಯಗೊಂಡರು. ಸೋಮವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ, ಫ್ರಾಂಚೈಸಿಯು ಮ್ಹಾತ್ರೆ ಅವರ ಗಾಯವು 6 ರಿಂದ 12 ವಾರಗಳ ಪುನರ್ವಸತಿ ಅವಧಿಯ ಅಗತ್ಯವಿರುವಷ್ಟು ತೀವ್ರವಾಗಿದೆ ಎಂದು ದೃಢಪಡಿಸಿದೆ.
ಮ್ಹಾತ್ರೆ 2026ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2025ನೇ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಮುಂಬೈ ಮೂಲದ ಯುವ ಆಟಗಾರ ಈ ವರ್ಷದ ಆರಂಭದಲ್ಲಿ ಭಾರತ U19 ತಂಡದ ನಾಯಕತ್ವ ವಹಿಸಿದ್ದರು. ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಇದ್ದವು.
ತಮ್ಮ ಅಧಿಕೃತ ಹೇಳಿಕೆಯಲ್ಲಿ CSK, 'ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಎಡ ಮಂಡಿರಜ್ಜು ಗಾಯದಿಂದಾಗಿ ಆಯುಷ್ ಮ್ಹಾತ್ರೆ ಅವರನ್ನು ಐಪಿಎಲ್ 2026ರ ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಆಯುಷ್ ಅವರ ಗಾಯಕ್ಕೆ 6-12 ವಾರಗಳ ಪುನರ್ವಸತಿ ಅವಧಿಯ ಅಗತ್ಯವಿರುತ್ತದೆ. ಆಯುಷ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದಿದ್ದಾರೆ.
ಮ್ಹಾತ್ರೆ ಈ ವರ್ಷ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರು ಆಡಿದ ಆರು ಪಂದ್ಯಗಳಲ್ಲಿ ತಂಡಕ್ಕೆ ಸ್ಫೋಟಕ ಆರಂಭಗಳನ್ನು ಒದಗಿಸಿದರು. ಲೀಗ್‌ನ ಅತ್ಯಂತ ಅಪಾಯಕಾರಿ ಯುವ ಆರಂಭಿಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅವರು ಎರಡು ಅರ್ಧ ಶತಕಗಳನ್ನು ಒಳಗೊಂಡಂತೆ 177.88ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್‌ಗಳನ್ನು ಕಲೆಹಾಕಿದ್ದಾರೆ ಮತ್ತು ಸದ್ಯದ ಆವೃತ್ತಿಯಲ್ಲಿ ರನ್ ಗಳಿಸಿದವರಲ್ಲಿ ಅಗ್ರ 15ರಲ್ಲಿ ಸ್ಥಾನ ಪಡೆದಿದ್ದಾರೆ. CSK ಪರವಾಗಿಯೂ ಅವರು ಈ ವರ್ಷ ಇಲ್ಲಿಯವರೆಗೆ ಗರಿಷ್ಠ ಸ್ಕೋರ್ ಮಾಡಿದ ಬ್ಯಾಟರ್ ಆಗಿದ್ದಾರೆ.
ಆಯುಷ್ ಮ್ಹಾತ್ರೆ ಬದಲಿ ಆಟಗಾರ ಯಾರು?
ಆಯುಷ್ ಮ್ಹಾತ್ರೆ ಇದೀಗ ಟೂರ್ನಿಯಿಂದಲೇ ಹೊರಬಿದ್ದಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರ ಬದಲಿ ಆಟಗಾರನನ್ನು ಹುಡುಕುವ ಸವಾಲಿಗೆ ಸಿಲುಕಿದೆ. ಪವರ್ ಹಿಟ್ಟರ್ ಆಗಿದ್ದ ಮ್ಹಾತ್ರೆ ಪಾತ್ರಕ್ಕೆ ಫ್ರಾಂಚೈಸಿಯೊಳಗೆ ಇರುವ ಉರ್ವಿಲ್ ಪಟೇಲ್ ಹೊಂದಿಕೆಯಾಗುವ ಸಾಧ್ಯತೆ ಇದೆ. ಪಟೇಲ್ ಕೂಡ ಇದೇ ರೀತಿಯ ಆಕ್ರಮಣಕಾರಿ ಪ್ರೊಫೈಲ್ ಅನ್ನು ಹೊಂದಿದ್ದಾರೆ ಮತ್ತು ಅವರು ಕೇವಲ 28 ಎಸೆತಗಳಲ್ಲಿ ವೇಗದ T20 ಶತಕದ ದಾಖಲೆಯನ್ನು ಹೊಂದಿದ್ದಾರೆ. ಪರ್ಯಾಯವಾಗಿ, ಫ್ರಾಂಚೈಸಿಯು ಕಾರ್ತಿಕ್ ಶರ್ಮಾ ಅವರತ್ತಲೂ ನೋಡಬಹುದು.
ಮಿನಿ-ಹರಾಜಿನಲ್ಲಿ ಮಾರಾಟವಾಗದ ಆಟಗಾರರ ಪೂಲ್ ಅನ್ನು ಸ್ಕೌಟ್ ಮಾಡಲು ಅವರು ಆಯ್ಕೆ ಮಾಡಿದರೆ, ಅನ್ಮೋಲ್ಪ್ರೀತ್ ಸಿಂಗ್ ಅಥವಾ ಮಾಜಿ U19 ನಾಯಕ ಯಶ್ ಧುಲ್ ಅವರಂತಹ ಅನುಭವಿಗಳತ್ತ ನೋಡಬಹುದು. ಈಮಧ್ಯೆ, ಸ್ವಸ್ತಿಕ್ ಚಿಕಾರ ಅವರಂತಹ ಆಟಗಾರರು ಪವರ್‌ಪ್ಲೇನಲ್ಲಿ ಉತ್ತಮ ಆಯ್ಕೆಯಾಗಬಹುದು.
Advertisement