

ಬಾಂಗ್ಲಾದೇಶದ ಆಟಗಾರರು ಭಾರತದಲ್ಲಿ 2026ರ ಟಿ20 ವಿಶ್ವಕಪ್ ಆಡಲು ನಿಜವಾಗಿಯೂ ಬಯಸಿದ್ದರು. ಆದರೆ, ಬಿಸಿಬಿ ಪಂದ್ಯಾವಳಿಯಿಂದ ಹೊರನಡೆಯಲು ನಿರ್ಧರಿಸಿದಾಗ ಆಟಗಾರರೊಂದಿಗೆ ಸಮಾಲೋಚಿಸಲಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಾಜಿ ಸಿಇಒ ಅಶ್ರಫುಲ್ ಹಕ್ ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ ಪಂದ್ಯಾವಳಿಯಿಂದಲೇ ಹೊರಗುಳಿಯಿತು. ಇದರಿಂದಾಗಿ ಸ್ಕಾಟ್ಲೆಂಡ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಪಡೆಯಿತು. ಇದಕ್ಕೂ ಮೊದಲು, ಬಾಂಗ್ಲಾದೇಶ ಸರ್ಕಾರವು ಟಿ20 ವಿಶ್ವಕಪ್ 2026ರಲ್ಲಿ ಆಡಲು ಆಟಗಾರರೇ ನಿರಾಕರಿಸಿದರು ಎಂದಿತ್ತು. ನಂತರ ಈ ನಿರ್ಧಾರವನ್ನು ಬಿಸಿಬಿ ತೆಗೆದುಕೊಂಡಿದೆ ಎಂದು ಹೇಳಿಕೊಂಡಿತ್ತು.
ರೆವ್‌ಸ್ಪೋರ್ಟ್ಜ್‌ಗೆ ನೀಡಿದ ಸಂದರ್ಶನದಲ್ಲಿ, ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಿಂದ ಹೊರಗುಳಿದಾಗ ಹಲವು ಬಾರಿ ಬೇರೆ ಬೇರೆ ಹೇಳಿಕೆ ನೀಡಿದ್ದಾರೆ. ಅವರು ಆಟಗಾರರು ಮತ್ತು ಬಿಸಿಬಿಯನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ. ಆಟಗಾರರು ಈ ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸಲು ಬಯಸಿದ್ದರು. ಆದರೆ, ಅವರೊಂದಿಗೆ ಮಾತನಾಡಲೇ ಇಲ್ಲ ಎಂದು ಎಸಿಸಿ ಮಾಜಿ ಸಿಇಒ ಹೇಳಿದರು.
'ಆಸಿಫ್ ನಜ್ರುಲ್ ಮೊದಲಿಗೆ ಆಟಗಾರರು ಮತ್ತು ತಂಡ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು. ಅದಾದ ಎರಡು ದಿನಗಳ ನಂತರ ಯೂಟರ್ನ್ ಹೊಡೆದ ಅವರು ಇದು ಸರ್ಕಾರದ ನಿರ್ಧಾರ ಎಂದು ಹೇಳಿದರು. ಏಕೆಂದರೆ, ನಾವು ಆ ಬಗ್ಗೆ ಯಾವುದೇ ವಿಚಾರವನ್ನು ಹೇಳಿಲ್ಲ ಎಂದು ಆಟಗಾರರು ಅವರ ಮೇಲೆ ಒತ್ತಡ ಹೇರಿದರು. ಆಟಗಾರರು ಯಾವಾಗಲೂ ಅಲ್ಲಿ ಆಡಲು ಬಯಸುತ್ತಾರೆ ಎಂದು ನನಗೆ ಖಚಿತವಾಗಿ ತಿಳಿದಿದೆ. ಆಟಗಾರರನ್ನು ಅದರ ಬಗ್ಗೆ ಕೇಳಲಾಗಿಲ್ಲ' ಎಂದು ಹಕ್ ಹೇಳಿದರು.
ಕೆಲವು ದಿನಗಳ ಹಿಂದೆ, ಬಾಂಗ್ಲಾದೇಶ ಸರ್ಕಾರದ ಕ್ರೀಡಾ ಸಲಹೆಗಾರ ನಜ್ರುಲ್, ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿದ್ದಕ್ಕೆ ಯಾವುದೇ ವಿಷಾದವಿಲ್ಲವಾದರೂ, ಈ ನಿರ್ಧಾರವನ್ನು ಬಿಸಿಬಿ ಮತ್ತು ಆಟಗಾರರು ತೆಗೆದುಕೊಂಡಿದ್ದಾರೆ. ದೇಶದ ಸುರಕ್ಷತೆಗಾಗಿ ಆಟಗಾರರು ಮತ್ತು ಮಂಡಳಿಯು ಈ 'ತ್ಯಾಗ' ಮಾಡಿದೆ ಎಂದು ಅವರು ಹೇಳಿದ್ದರು. ಇದಕ್ಕೂ ಹಿಂದೆ, ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮಕ್ಕಾಗಿ ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸದಿರಲು ಬಾಂಗ್ಲಾದೇಶ ಸರ್ಕಾರ ತೆಗೆದುಕೊಂಡ ನಿರ್ಧಾರ ಇದಾಗಿದೆ ಎಂದು ನಜ್ರುಲ್ ಹೇಳಿಕೊಂಡಿದ್ದರು.
Advertisement