

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ವಿರಾಟ್ ಅವರನ್ನು ಕಣ್ತುಂಬಿಕೊಳ್ಳಲೆಂದೇ ಅಪಾರ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರುತ್ತಾರೆ. ಸದ್ಯ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತವರಿನಲ್ಲಿ ಆಡುತ್ತಿರುವುದರಿಂದ, ಹೆಚ್ಚಿನ ಅಭಿಮಾನಿಗಳು ಸೇರುತ್ತಿದ್ದಾರೆ.
ಜನವರಿ 14 ರಂದು ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ, ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಚಿತ್ರವಿರುವ ಐಫೋನ್ ಕೇಸ್ ಹಿಡಿದು ಹೋಗುತ್ತಿರುವುದು ಕಂಡುಬಂದಿತು. ಆರಂಭದಲ್ಲಿ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೂ, ನಂತರ ಅಭಿಮಾನಿ ಕೊಹ್ಲಿಯ ಕೆತ್ತಿದ ವ್ಯಂಗ್ಯಚಿತ್ರವಿರುವ ಚಿನ್ನದಿಂದ ಮಾಡಿದ ಐಫೋನ್ ಕವರ್ ಧರಿಸಿದ್ದು, ಅದನ್ನು ಬ್ಯಾಟಿಂಗ್ ದಿಗ್ಗಜನಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದಾರೆ ಎಂದು ತಿಳಿದುಬಂದಿದೆ. ವರದಿ ಪ್ರಕಾರ, ಕವರ್ ಸದ್ಯ ₹15 ಲಕ್ಷ ಮೌಲ್ಯದ್ದಾಗಿದೆ.
37 ವರ್ಷದ ಕ್ರಿಕೆಟಿಗನ ಬಗ್ಗೆ ಅಭಿಮಾನಿಯೊಬ್ಬರು ತಮ್ಮ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ, ಅಭಿಮಾನಿಗಳು ಅವರ ಭಾವಚಿತ್ರಗಳು, ಬ್ರೇಸ್‌ಲೆಟ್‌ಗಳು ಮತ್ತು ಇತರ ಹಲವಾರು ಉಡುಗೊರೆಗಳನ್ನು ನೀಡಿದ್ದಾರೆ.
ರೋಹಿತ್ ಶರ್ಮಾ ಹಿಂದಿಕ್ಕಿದ ವಿರಾಟ್ ಕೊಹ್ಲಿ
37 ವರ್ಷದ ದೆಹಲಿ ಮೂಲದ ಕ್ರಿಕೆಟಿಗ ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 91 ಎಸೆತಗಳಲ್ಲಿ 93 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ಇತ್ತೀಚಿನ ಐಸಿಸಿ ಪುರುಷರ ಏಕದಿನ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಸುಮಾರು ಐದು ವರ್ಷಗಳ ಬಳಿಕ ಮೊದಲ ಬಾರಿಗೆ ತಂಡದ ಸಹ ಆಟಗಾರ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
Advertisement