

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳ ಉತ್ಸಾಹ ಎಷ್ಟರ ಮಟ್ಟಿಗೆ ಇರುತ್ತೆ ಎಂದರೆ ವಿರಾಟ್ ಕೊಹ್ಲಿ ಅವರಿಂದಲೇ ತಪ್ಪು ಸಂಭವಿಸಿದರೂ ಕೂಡ ಅದಕ್ಕೆ ಕಾರಣ ಅವರಲ್ಲ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ. ಇಂದೋರ್‌ನಲ್ಲಿ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ನಂತರ ಕ್ರೀಡಾ ಸಲಕರಣೆಗಳ ತಯಾರಕರಾದ ಎಸ್‌ಜಿ (ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್) ಮತ್ತು ಕೂಕಬುರ್ರಾ ಸಾಮಾಜಿಕ ಮಾಧ್ಯಮ ಖಾತೆಯು ಟ್ರೋಲಿಂಗ್‌ಗೆ ಗುರಿಯಾಗಿವೆ.
ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ತಪ್ಪು ಮಾಡಿದ ನಂತರ ಅಭಿಮಾನಿಗಳು ಎಸ್‌ಜಿ ಮತ್ತು ಕೂಕಬುರ್ರಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ. ನ್ಯೂಜಿಲೆಂಡ್ ಇನಿಂಗ್ಸ್ ವೇಳೆ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಕೊಹ್ಲಿ, ಮೈದಾನದಲ್ಲಿ ಚೆಂಡನ್ನು ಹಿಡಿಯುವಾಗ ಸಾಕಷ್ಟು ಪರದಾಡಿದ್ದು ಕಂಡುಬಂತು. ಕೊಹ್ಲಿ ಬೆಂಬಲಿಗರು ಆಟಗಾರನನ್ನು ಟೀಕಿಸುವ ಬದಲು, ಅಂತರರಾಷ್ಟ್ರೀಯ ಸರಣಿಗಳಿಗೆ ಕ್ರಿಕೆಟ್ ಚೆಂಡುಗಳನ್ನು ತಯಾರಿಸುವ ಕಂಪನಿಗಳಾದ ಎಸ್‌ಜಿ ಮತ್ತು ಕೂಕಬುರ್ರಾ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಗೆ ತೆರಳಿ ಕಮೆಂಟ್ ಮಾಡುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ.
ಕೆಲವು ಅಭಿಮಾನಿಗಳು ವಿರಾಟ್ ಕೊಹ್ಲಿ ಪರದಾಡಿದ್ದಕ್ಕೆ ಚೆಂಡಿನ ವಿನ್ಯಾಸವೇ ಕಾರಣ ಎಂದು ದೂಷಿಸಿದ್ದಾರೆ. ಇನ್ನೂ ಕೆಲವರು ತಮ್ಮ ಕ್ರಿಕೆಟ್ ಚೆಂಡುಗಳ 'ಹಿಡಿತವನ್ನು ಸುಧಾರಿಸಿ', ಇದರಿಂದ ಕೊಹ್ಲಿ ಭವಿಷ್ಯದಲ್ಲಿ ಅಂತಹ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಕಂಪನಿಯನ್ನು ಕೇಳಿಕೊಂಡಿದ್ದಾರೆ.
ಒಬ್ಬ ಅಭಿಮಾನಿ, 'ದಯವಿಟ್ಟು ಚೆಂಡಿನ ಮೇಲ್ಮೈಯಲ್ಲಿ ಕೆಲಸ ಮಾಡಿ. ಇದು ಕಿಂಗ್ ಕೊಹ್ಲಿಗೆ ತುಂಬಾ ಜಾರುತ್ತದೆ' ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, 'ಬಾಲ್‌ನ ಗುಣಮಟ್ಟವನ್ನು ಸರಿಪಡಿಸಿ, ನಿಮ್ಮ ಚೆಂಡಿನಿಂದಾಗಿ ಇಂದು ನಮಗೆ ಒಂದು ವಿಕೆಟ್ ಸಿಗದಂತಾಯಿತು' ಎಂದು ಬರೆದಿದ್ದಾರೆ.
ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಸಂಬದ್ಧವಾಗಿ ಟ್ರೋಲ್ ಮಾಡುತ್ತಿರುವ ಮೊದಲ ಪ್ರಕರಣ ಇದಲ್ಲ. 2025ರ ಮಾರ್ಚ್‌ನಲ್ಲಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ತೆಗೆದುಕೊಂಡು ಕೊಹ್ಲಿಯನ್ನು ಔಟ್ ಮಾಡಿದ ನಂತರ, ಅಭಿಮಾನಿಗಳು ಎಲೆಕ್ಟ್ರಾನಿಕ್ಸ್ ದೈತ್ಯ ಫಿಲಿಪ್ಸ್‌ನ ಇನ್‌ಸ್ಟಾಗ್ರಾಂ ಖಾತೆಯನ್ನು ಟ್ರೋಲ್ ಮಾಡಿದ್ದರು ಮತ್ತು 'ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ' ಎಂದು ಒತ್ತಾಯಿಸಿದ್ದರು.
ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದರೂ, ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೊಹ್ಲಿ 108 ಎಸೆತಗಳಲ್ಲಿ 124 ರನ್ ಗಳಿಸಿದರು. ಇದು ಅವರ 54ನೇ ಏಕದಿನ ಶತಕವಾಗಿದೆ. 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಅಂತಿಮವಾಗಿ 41 ರನ್‌ಗಳಿಂದ ಸೋಲು ಕಂಡಿತು. ಭಾರತದ ನೆಲದಲ್ಲಿ ನ್ಯೂಜಿಲೆಂಡ್‌ನ ಮೊದಲ ಏಕದಿನ ಸರಣಿ ಗೆಲುವಿಗೆ ಕಾರಣವಾಯಿತು.
Advertisement