ಭಾರತ ತಂಡ ಮೂರನೇ ಟಿ20ಐನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಇದೀಗ ಮತ್ತೊಂಮ್ಮೆ ಕೇಂದ್ರಬಿಂದುವಾಗಿದ್ದಾರೆ. 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆದ ನಂತರ, 2026ರ ಟಿ20 ವಿಶ್ವಕಪ್ ಗೆಲುವಿನ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಪಂದ್ಯದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗಂಭೀರ್, ತಮ್ಮ ಮತ್ತು ಸ್ಯಾಮ್ಸನ್ ನಡುವಿನ ವಿಷಯದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ಆದರೆ, ಸಂಭಾಷಣೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಅವರ ಬದಲಿಗೆ 15 ವರ್ಷದ ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ, ವೈಭವ್ ಕೂಡ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದಾಗ್ಯೂ, ಭಾರತದ ಟಿ20 ತಂಡದಲ್ಲಿನ ತಮ್ಮ ಪಾತ್ರದ ಕುರಿತು ಸ್ಯಾಮ್ಸನ್ ಅವರಿಗೆ ಸಂಪೂರ್ಣ ಸ್ಪಷ್ಟತೆ ನೀಡಲಾಗಿದೆ ಎಂದು ಗಂಭೀರ್ ಹೇಳಿದರು.
'ಮೊದಲನೆಯದಾಗಿ, ಸಂಜು ಸ್ಯಾಮ್ಸನ್ ಅವರಿಗೆ ಅಗತ್ಯವಿದ್ದ ಸ್ಪಷ್ಟತೆಯನ್ನು ನನ್ನ ಕಡೆಯಿಂದ ನೀಡಲಾಗಿದೆ. ಅದು ಆಟಗಾರ ಮತ್ತು ಮುಖ್ಯ ಕೋಚ್ ನಡುವಿನ ಸಂಪೂರ್ಣ ಖಾಸಗಿ ಸಂಭಾಷಣೆ; ಆ ವಿಷಯ ಹೊರಗೆ ಬರುವುದಿಲ್ಲ' ಎಂದು ಪತ್ರಿಕಾಗೋಷ್ಠಿಯಲ್ಲಿ ಗಂಭೀರ್ ಹೇಳಿದರು.
'ಸಂಜು ವಿಷಯದಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ಭಾರತಕ್ಕಾಗಿ ಅವರು ನೀಡಿರುವ ಕೊಡುಗೆ ಅದ್ಭುತವಾಗಿದೆ; ಕೆಲವೊಮ್ಮೆ ಆಟಗಾರನ ಸದ್ಯದ ಫಾರ್ಮ್ ಅನ್ನು ಗಮನಿಸಬೇಕಾಗುತ್ತದೆ. ಈ ಸರಣಿಯಲ್ಲಿ ಅವರು ಮತ್ತೆ ತಂಡಕ್ಕೆ ಮರಳಲು ಸಾಧ್ಯವಿಲ್ಲ ಎಂಬಂತಹ ಯಾವುದೇ ಕಟ್ಟುನಿಟ್ಟಾದ ನಿಯಮವಿಲ್ಲ' ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಕ್ರಿಕೆಟ್ ಎಂದರೆ ವ್ಯಕ್ತಿಗಳ ಬಗ್ಗೆ ಅಲ್ಲ, ತಂಡದ ಸಂಯೋಜನೆ ಎಂದರು. ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಸಂಯೋಜನೆಯನ್ನು ಮ್ಯಾನೇಜ್ಮೆಂಟ್ ನಂಬಿದ್ದರಿಂದ ಅವರನ್ನು ತಂಡಕ್ಕೆ ಕರೆತರಲಾಯಿತು. ಆದಾಗ್ಯೂ, ತಪ್ಪು ಸೂರ್ಯವಂಶಿಯವರದ್ದಲ್ಲ; ಇಡೀ ಭಾರತೀಯ ತಂಡವು ಯುನೈಟೆಡ್ ಕಿಂಗ್ಡಮ್ ಪ್ರವಾಸದಲ್ಲಿ, ಐರ್ಲೆಂಡ್ ವಿರುದ್ಧ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
'ಅಂತರರಾಷ್ಟ್ರೀಯ ಕ್ರಿಕೆಟ್ ಫಲಿತಾಂಶಗಳು ಮುಖ್ಯವಾಗಿರುವುದರಿಂದ ಆ ಫಲಿತಾಂಶ ಪಡೆಯಲು ಉತ್ತಮ ಸಂಯೋಜನೆ ಎಂದು ನಾವು ಭಾವಿಸುವ ಯಾವುದೇ ಸಂಯೋಜನೆಯನ್ನು ನಾವು ಆಡಿಸುತ್ತೇವೆ. ನಾವು ಆ ಸಂಯೋಜನೆಯನ್ನು ಮತ್ತು ಆ ಪ್ಲೇಯಿಂಗ್ XI ಅನ್ನು ನೋಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಸ್ಥಾನ ಮತ್ತು ಭಾರತಕ್ಕಾಗಿ ಆಡುವ ಹಕ್ಕನ್ನು ಗಳಿಸಬೇಕು ಎಂಬುದರಲ್ಲಿ ನಾನು ಯಾವಾಗಲೂ ನಂಬಿಕೆ ಇಟ್ಟಿದ್ದೇನೆ' ಎಂದರು.
'ಹೊಂದಿಕೊಳ್ಳುವಿಕೆಯ ವಿಷಯಕ್ಕೆ ಬಂದರೆ, ನಾವು ಸಮರ್ಪಕವಾಗಿ ಹೊಂದಿಕೊಂಡಿಲ್ಲ ಎಂಬುದು ಸ್ಪಷ್ಟ. ಐರ್ಲೆಂಡ್ ಆಗಲಿ ಅಥವಾ ಇಂಗ್ಲೆಂಡ್ ಆಗಲಿ, ನಾವು ಚೆನ್ನಾಗಿ ಹೊಂದಿಕೊಂಡಿದ್ದರೆ ಅಥವಾ ಉತ್ತಮ ಕ್ರಿಕೆಟ್ ಆಡಿದ್ದರೆ, ಬಹುಶಃ ಸತತ ನಾಲ್ಕು ಪಂದ್ಯಗಳನ್ನು ಸೋಲುತ್ತಿರಲಿಲ್ಲ' ಎಂದು ಭಾರತ ತಂಡದ ಕೋಚ್ ಹೇಳಿದರು.