

ನವದೆಹಲಿ: ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಿರಾಶಾದಾಯಕ ಪ್ರದರ್ಶನಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನೊಬ್ಬರನ್ನೇ ಹೊಣೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ (MSK Prasad) ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದ ಇತ್ತೀಚಿಗಿನ ಪ್ರದರ್ಶನದ ಕುರಿತು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಎಂಎಸ್‌ಕೆ ಪ್ರಸಾದ್, "ಈ ಸೋಲಿನ ಸಂಪೂರ್ಣ ಹೊಣೆಯನ್ನು ಗೌತಮ್ ಗಂಭೀರ್ ಮೇಲೆ ಹಾಕುವುದು ಸರಿಯಲ್ಲ. ಏಕೆಂದರೆ ಇದು ವಿಶ್ವಕಪ್ ಗೆದ್ದ ಸಂಪೂರ್ಣ ತಂಡವೇ ಆಗಿರಲಿಲ್ಲ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಅಮೂಲ್ಯ ಆಟಗಾರರನ್ನು ನಾವು ಕಳೆದುಕೊಂಡಿದ್ದೆವು" ಎಂದು ಹೇಳಿದರು.
ವಿಶ್ವದ ನಂ.1 ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರೆ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ಟಿ20 ಮಾದರಿಯಲ್ಲಿ ವಿಶ್ರಾಂತಿ ನೀಡಲಾಗಿತ್ತು. ಜೊತೆಗೆ ಸೂರ್ಯಕುಮಾರ್ ಯಾದವ್ ಕೂಡ ತಂಡದಲ್ಲಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ಅವರಿಗೆ ಅತ್ಯುತ್ತಮ ತಂಡ ಲಭ್ಯವಾಗಿರಲಿಲ್ಲ ಎಂದು ಪ್ರಸಾದ್ ಹೇಳಿದರು.
ಇದು ಸಂಪೂರ್ಣ ಭಾರತ ತಂಡವೇ ಅಲ್ಲ
ಇದೇ ವೇಳೆ, ಹಾಲಿ ತಂಡವನ್ನು ಸಂಪೂರ್ಣ ಭಾರತ ತಂಡವೇ ಅಲ್ಲ ಎಂದಿರುವ ಪ್ರಸಾದ್, 'ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿತ್ತು. ಆದರೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಮೂರೂ ವಿಭಾಗಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ತಂಡದ ಸಂಯೋಜನೆಯೂ ಸಮರ್ಪಕವಾಗಿರಲಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.
ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವ ನಿರ್ಧಾರವನ್ನು ಪ್ರಶ್ನಿಸಿದ ಪ್ರಸಾದ್, "ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದು ದೊಡ್ಡ ತಪ್ಪು. ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಅವರು ಭಾರತದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ಹಲವು ಬಾರಿ ಪಂದ್ಯ ಗೆಲ್ಲಿಸಿಕೊಟ್ಟಿರುವ ಆಟಗಾರ. ಭಾರತ ತಂಡದ ಆಡುವ ಹನ್ನೊಂದನ್ನು ಬರೆಯುವಾಗ ಮೊದಲಿಗೆ ಅವರ ಹೆಸರೇ ಇರಬೇಕು" ಎಂದರು.
ಸೂರ್ಯವಂಶಿಗೆ ಅವಕಾಶ ನೀಡಲು ಅನುಭವಿ ಆಟಗಾರರು ಹೊರಕ್ಕೆ!
"ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕೆಂಬ ಒತ್ತಡದ ಕಾರಣಕ್ಕೆ ಸಂಜು ಅವರಂತಹ ಅನುಭವಿ ಆಟಗಾರ ಹೊರಗೆ ಕೂರಬಾರದು. ನಾನು ವೈಭವ್ ಸೂರ್ಯವಂಶಿಯ ದೊಡ್ಡ ಅಭಿಮಾನಿ. ಅವರ ಪ್ರತಿಭೆ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಯುವ ಆಟಗಾರರನ್ನು ಬೆಳೆಸುವುದಕ್ಕೂ ಒಂದು ಪ್ರಕ್ರಿಯೆ ಹಾಗೂ ಸೂಕ್ತ ಸಮಯ ಇರುತ್ತದೆ," ಎಂದು ಅವರು ಹೇಳಿದರು.
ಗೌತಮ್ ಗಂಭೀರ್ ಅವರ ಕಾರ್ಯಕ್ಷಮತೆಯನ್ನು ಈಗಲೇ ಮೌಲ್ಯಮಾಪನ ಮಾಡುವುದು ಸೂಕ್ತವಲ್ಲ ಎಂದು ಹೇಳಿದ ಪ್ರಸಾದ್, "ಗಂಭೀರ್ ಅಥವಾ ಈ ತಂಡದ ಬಗ್ಗೆ ಈಗಲೇ ತೀರ್ಪು ನೀಡುವುದು ತೀರಾ ಆತುರದ ನಿರ್ಧಾರವಾಗುತ್ತದೆ. ಎಲ್ಲಾ ಹಿರಿಯ ಆಟಗಾರರು ತಂಡಕ್ಕೆ ಮರಳಿದ ಬಳಿಕ ತಂಡದ ಪ್ರದರ್ಶನವನ್ನು ಗಮನಿಸಿ, ನಾಯಕ ಹಾಗೂ ಕೋಚ್ ಅವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬೇಕು," ಎಂದು ಅಭಿಪ್ರಾಯಪಟ್ಟರು.