

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಐತಿಹಾಸಿಕ ಶತಕ ಸಿಡಿಸಿದ್ದು, ಆ ಮೂಲಕ ತಮ್ಮ ಬ್ಯಾಟ್ ನಿಂದಲೇ ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿರುವ 388 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ.
ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ ತಮ್ಮ ಏಕದಿನ ವೃತ್ತಿಜೀವನದ 34ನೇ ಶತಕವನ್ನು ಪೂರೈಸಿದರು. 120.24 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ತಕ್ಕ ತಿರುಗೇಟು ನೀಡಿದರು.
ಬೌಂಡರಿಯೊಂದಿಗೆ ಶತಕ ಪೂರೈಸಿದ ರೋಹಿತ್ ಶರ್ಮಾ ಲಾರ್ಡ್ಸ್‌ನಲ್ಲಿ ಏಕದಿನ ಪಂದ್ಯಗಳಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರು 39 ವರ್ಷ ಮತ್ತು 80 ದಿನಗಳಲ್ಲಿ ಈ ಸಾಧನೆ ಮಾಡಿದರು.
47 ವರ್ಷಗಳ ಶತಕದ ಬರ ನೀಗಿಸಿದ ಹಿಟ್ ಮ್ಯಾನ್
ಇನ್ನು ಕಳೆದೆರಡು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ( Rohit Sharma) ಈ ಪಂದ್ಯದಲ್ಲಿ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಲಾರ್ಡ್ಸ್ (Lord’s) ಅಂಗಳದಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದ 47 ವರ್ಷಗಳ ಶತಕದ ಬರವನ್ನು ನೀಗಿಸಿದ್ದಾರೆ.
ಗಿಲ್ ಜೊತೆ ಅದ್ಭುತ ಜೊತೆಯಾಟ
ಈ ಪಂದ್ಯದಲ್ಲಿ ಭಾರತ ದಾಖಲೆಯ ಚೇಸಿಂಗ್ ಮಾಡುತ್ತಿದ್ದು ಇದಕ್ಕೆ ಸಮಾನವಾಗಿ ರೋಹಿತ್ ಶರ್ಮಾ ಮತ್ತು ನಾಯಕ ಶುಭ್ ಮನ್ ಗಿಲ್ ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 147 ರನ್ ಗಳ ಅಮೋಘ ಜೊತೆಯಾಟವಾಡಿತು. 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಸತತ ಎರಡು ಬೌಂಡರಿಗಳನ್ನು ಬಾರಿಸಿ ತಮ್ಮ ಅರ್ಧಶತಕವನ್ನು ಆಚರಿಸಿದರು.
ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 6 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಅರ್ಧಶತಕದ ಬಳಿಕ ಗೇರ್ ಬದಲಿಸಿದ ರೋಹಿತ್, ಶುಭ್ಮನ್ ಗಿಲ್ ಅವರೊಂದಿಗೆ 147 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ನಾಯಕ ಗಿಲ್ 77 ರನ್ ಗಳಿಸಿ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಅದರ ನಂತರವೂ ಬಿರುಗಾಳಿಯ ಬ್ಯಾಟಿಂಗ್ ಮುಂದುವರೆಸಿದ ರೋಹಿತ್ ಲಾರ್ಡ್ಸ್‌ನಲ್ಲಿ ಐತಿಹಾಸಿಕ ಶತಕ ಬಾರಿಸಿದರು.
ಸಚಿನ್-ಕೊಹ್ಲಿ ಕೂಡ ಮಾಡದ ದಾಖಲೆ ಮಾಡಿದ ರೋಹಿತ್ ಶರ್ಮಾ
ಅಂತೆಯೇ ಇಂಗ್ಲೆಂಡ್‌ನಲ್ಲಿ ರೋಹಿತ್ ತಮ್ಮ 8ನೇ ಏಕದಿನ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ಎಬಿ ಡಿವಿಲಿಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ದಾಖಲೆಗಳನ್ನು ಮುರಿದರು. ವಿದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಈಗ ಅಗ್ರಸ್ಥಾನದಲ್ಲಿದ್ದಾರೆ. ಈ ಹಿಂದೆ, ಸಚಿನ್, ಅನ್ವರ್, ಎಬಿ ಮತ್ತು ಡಿ ಕಾಕ್ ವಿದೇಶಿ ನೆಲದಲ್ಲಿ ತಲಾ 7 ಶತಕಗಳನ್ನು ಬಾರಿಸಿದ್ದರು.
Most ODI hundreds in a visiting country
8 Rohit Sharma in England
7 Sachin Tendulkar in UAE
7 Saeed Anwar in UAE
7 AB de Villiers in India
7 Quinton de Kock in India
Only Joe Root (10) has more ODI hundreds in England while Marcus Trescothick also has eight.
10 ನೇ ಶತಕ
ಇಂಗ್ಲಿಷ್ ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ ರೋಹಿತ್ಗೆ ಇದು 10 ನೇ ಶತಕವಾಗಿದೆ. ಈ ಮೂಲಕ ರೋಹಿತ್, ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ದಾಖಲೆಯನ್ನು ಮುರಿದರು. ವಿವ್ ಇಂಗ್ಲೆಂಡ್‌ನಲ್ಲಿ ಒಟ್ಟು 9 ಶತಕಗಳನ್ನು ಬಾರಿಸಿದ್ದರು. ಇನ್ನು ಡಾನ್ ಬ್ರಾಡ್ಮನ್ 11 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಾರ್ಡನ್ ಗ್ರೀನಿಡ್ಜ್, ಸ್ಟೀವ್ ವಾ, ರಾಹುಲ್ ದ್ರಾವಿಡ್ ಮತ್ತು ಸ್ಟೀವ್ ಸ್ಮಿತ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.
ಅಂತೆಯೇ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ ಗಳಿಸಿದ 138 ರನ್ ಭಾರತ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಏಕದಿನ ಸ್ಕೋರ್ ಆಗಿದೆ. ಈ ಮೂಲಕ ಅವರು 2018ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ತಾವೇ ಬಾರಿಸಿದ್ದ ಅಜೇಯ 137 ರನ್ಗಳ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇಂಗ್ಲೆಂಡ್‌ನಲ್ಲಿ ಭಾರತದ ಪರ ದಾಖಲಾದ ಅಗ್ರ ಐದು ವೈಯಕ್ತಿಕ ಸ್ಕೋರ್‌ಗಳೆಲ್ಲವೂ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿಯೇ ದಾಖಲಾಗಿವೆ.