

ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಗಂಭೀರ ಅಪರಾಧಗಳ ಆರೋಪಕ್ಕೆ ಸಂಬಂದಿಸಿದಂತೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ರಿಕೆಟಿಗ ಅಭಿಷೇಕ್ ಪೊರೆಲ್ ಮತ್ತು ಮತ್ತೊಬ್ಬ ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಇದಕ್ಕೂ ಮುನ್ನ ಜೂನ್ ತಿಂಗಳಲ್ಲಿ, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿ, ನಂತರ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಂಗಾಳ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್-ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು.
ಹಿಂದೆ 'ಇಂಡಿಯಾ ಎ' ತಂಡದೊಂದಿಗೆ ಯುಕೆ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪೊರೆಲ್, ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಜೂನ್ 23ರಂದು ಹೂಗ್ಲಿ ಜಿಲ್ಲೆಯ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ತಾಯಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಪೊಲೀಸರು ಈ ಕುರಿತು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ತಾನು ಮತ್ತು ಪೊರೆಲ್ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದೆವು ಮತ್ತು ಕಳೆದ ವರ್ಷವಷ್ಟೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು; ಆ ನಂತರ ಆ ಕ್ರಿಕೆಟಿಗ ತನ್ನಿಂದ 'ದೂರವಾಗಲು' ಪ್ರಾರಂಭಿಸಿದನು ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನನ್ನು ಮದುವೆಯಾಗುವುದಾಗಿ ಪೊರೆಲ್ ಭರವಸೆ ನೀಡಿದ್ದರೂ, ಈಗ ಅದಕ್ಕೆ ನಿರಾಕರಿಸುತ್ತಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಲಾಗಿದೆ ಎಂದೂ ದೂರಿದ್ದಾರೆ.
'ನಮಗೆ ದೂರು ಬಂದಿದೆ ಮತ್ತು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಪೊರೆಲ್, ಅವು ಸುಳ್ಳು. ನಾನು ಈಗ ಉತ್ತಮವಾಗಿ ಆಡುತ್ತಿದ್ದೇನೆ, ಹಾಗಾಗಿ ಇಂತಹ ವಿವಿಧ ವಿಷಯಗಳು ಮುನ್ನೆಲೆಗೆ ಬರುತ್ತಿವೆ ಎಂದು ಪೊರೆಲ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಎಡಗೈ ಅಗ್ರ ಕ್ರಮಾಂಕದ ಬ್ಯಾಟರ್ ಆಗಿರುವ ಪೊರೆಲ್, 2023ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ನಾಲ್ಕು ಇನಿಂಗ್ಸ್‌ಗಳಲ್ಲಿ 108 ರನ್ ಗಳಿಸಿದ್ದರು.
ಅವರು 2021-22ರ ಆವೃತ್ತಿಯಲ್ಲಿ ಬಂಗಾಳ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಇಲ್ಲಿಯವರೆಗೆ 32 ಪ್ರಥಮ ದರ್ಜೆ ಹಾಗೂ 23 'ಲಿಸ್ಟ್ ಎ' (List A) ಪಂದ್ಯಗಳನ್ನು ಆಡಿದ್ದಾರೆ.