Cricket: IPL 2026 ಎಫೆಕ್ಟ್; ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಭಾರತ T20 ತಂಡಕ್ಕೆ ಆಯ್ಕೆ

ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ದಿಢೀರ್ ಗಾಯದ ಸಮಸ್ಯೆಗೆ ತುತ್ತಾಗಿದ್ದು ಅವರ ಸ್ಥಾನಕ್ಕೆ ಮಹಾರಾಷ್ಟ್ರ ಮೂಲದ ಸೂರ್ಯಾಂಶ್ ಶೆಡ್ಗೆ ಆಯ್ಕೆಯಾಗಿದ್ದಾರೆ.
Suryansh Shedge
ಸೂರ್ಯಾಂಶ್ ಶೆಡ್ಗೆ
Updated on

ನವದೆಹಲಿ: ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಮತ್ತೋರ್ವ ಉದಯೋನ್ಮುಖ ಆಟಗಾರ ಸೂರ್ಯಾಂಶ್ ಶೆಡ್ಗೆ ಆಯ್ಕೆಯಾಗಿದ್ದಾರೆ.

ಹೌದು.. ಈ ಹಿಂದೆ ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ದಿಢೀರ್ ಗಾಯದ ಸಮಸ್ಯೆಗೆ ತುತ್ತಾಗಿದ್ದು ಅವರ ಸ್ಥಾನಕ್ಕೆ ಮಹಾರಾಷ್ಟ್ರ ಮೂಲದ ಸೂರ್ಯಾಂಶ್ ಶೆಡ್ಗೆ ಆಯ್ಕೆಯಾಗಿದ್ದಾರೆ.

ಜೂನ್ 20ರಂದು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದ ಬಳಿಕ ನಿತೀಶ್ ಕುಮಾರ್ ರೆಡ್ಡಿ ಎಡ ಕಾಲಿನ ಕ್ವಾಡ್ರಿಸೆಪ್ಸ್ ಸ್ನಾಯುವಿನಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದ್ದರು.

ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯಕೀಯ ತಂಡವು ಅವರಿಗೆ ಪುನಶ್ಚೇತನ ಚಿಕಿತ್ಸೆ ಅಗತ್ಯವೆಂದು ಶಿಫಾರಸು ಮಾಡಿದ್ದು, ಇದರ ಪರಿಣಾಮವಾಗಿ ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಎರಡೂ ಟಿ20 ಸರಣಿಗಳಿಂದ ಹೊರಗುಳಿದಿದ್ದಾರೆ.

ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ

ಇನ್ನು ಸೂರ್ಯಾಂಶ್ ಶೆಡ್ಗೆ ಈ ಹಿಂದೆ ಐಪಿಎಲ್ 2026 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ತೋರಿದ್ದ ಸೂರ್ಯಾಂಶ್ ರಾಷ್ಟ್ರೀಯ ಆಯ್ಕೆದಾರರ ಕಣ್ಣಿಗೆ ಬಿದಿದ್ದರು.

ಬಳಿಕ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಗೂ ಶೆಡ್ಗೆ ಆಯ್ಕೆಯಾಗಿದ್ದರು. ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡದ ಪರ ಸೂರ್ಯಾಂಶ್ ಶೇಡ್ಗೆ ತೋರಿದ ಅತ್ಯುತ್ತಮ ಪ್ರದರ್ಶನವೇ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 23 ವರ್ಷದ ಶೆಡ್ಗೆ, ಐದು ಪಂದ್ಯಗಳಲ್ಲಿ 147 ರನ್ ಗಳಿಸಿದ್ದು, ಬೌಲಿಂಗ್‌ನಲ್ಲೂ 23 ಓವರ್‌ಗಳನ್ನು ಎಸೆದು ತಂಡಕ್ಕೆ ಕೊಡುಗೆ ನೀಡಿದ್ದಾರೆ.

ಅಲ್ಲದೆ 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಆಗಲು ಶೆಡ್ಗೆ ಪ್ರಮುಖ ಪಾತ್ರವಹಿಸಿದ್ದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅವರು 251.92ರ ಅದ್ಭುತ ಸ್ಟ್ರೈಕ್‌ರೇಟ್‌ನೊಂದಿಗೆ 131 ರನ್ ಕಲೆಹಾಕಿದ್ದರು.

ಆಲ್ರೌಂಡರ್ ಸೂರ್ಯಾಂಶ್ ಶೆಡ್ಗೆ ಅವರಿಗೆ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ತಂಡದಿಂದ ಕರೆ ಬಂದಿದೆ. ಗಾಯಗೊಂಡಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗಳಿಗೆ ಭಾರತ ತಂಡದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

“ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗಳಿಗಾಗಿ ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಸೂರ್ಯಾಂಶ್ ಶೆಡ್ಗೆ ಅವರನ್ನು ಆಯ್ಕೆ ಸಮಿತಿಯು ಭಾರತ ತಂಡಕ್ಕೆ ಸೇರಿಸಿದೆ,” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

Suryansh Shedge
Telangana T20 League: 13 ಸಿಕ್ಸರ್, 12 ಬೌಂಡರಿ, ವೇಗದ ಶತಕ ಸಿಡಿಸಿದ ಯುವ ಕ್ರಿಕೆಟಿಗ ಅಮನ್ ರಾವ್!

ಇನ್ನೂ ಚೇತರಿಸಿಕೊಳ್ಳದ ಹಾರ್ದಿಕ್ ಪಾಂಡ್ಯಾ

ಇನ್ನು ಹಾರ್ದಿಕ್ ಪಾಂಡ್ಯ ಕೂಡ ಕ್ವಾಡ್ರಿಸೆಪ್ಸ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಏಕದಿನ ಪಂದ್ಯಗಳಲ್ಲಿ ಪೂರ್ಣ 10 ಓವರ್‌ಗಳನ್ನು ಬೌಲಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ನಿತೀಶ್ ರೆಡ್ಡಿ ತಂಡದ ಆಲ್‌ರೌಂಡರ್ ಸ್ಥಾನವನ್ನು ತುಂಬಬೇಕಾಗಿತ್ತು. “ನಿತೀಶ್ ಕುಮಾರ್ ರೆಡ್ಡಿ ಐರ್ಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ.

ಎಂಆರ್‌ಐ ಪರೀಕ್ಷೆಯಲ್ಲಿ ಎಡ ಕ್ವಾಡ್ರಿಸೆಪ್ಸ್ ಸ್ನಾಯುವಿನಲ್ಲಿ ಊತ ಹಾಗೂ ಸ್ನಾಯು ತಂತುಗಳಲ್ಲಿ ಹಾನಿಯಾಗಿರುವುದು ಪತ್ತೆಯಾಗಿದೆ. ಹೆಚ್ಚಿನ ಮೌಲ್ಯಮಾಪನಕ್ಕಾಗಿ ಅವರನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ,” ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ.

ಮಾಹಿತಿಯ ಪ್ರಕಾರ, ನಿತೀಶ್ ಕನಿಷ್ಠ ನಾಲ್ಕು ವಾರಗಳ ಕಾಲ ಪುನಶ್ಚೇತನ ಪ್ರಕ್ರಿಯೆಯಲ್ಲಿ ಇರಬೇಕಾಗಿದ್ದು, ಅವರ ಚೇತರಿಕೆ ಅವಧಿ ಇನ್ನಷ್ಟು ವಿಸ್ತರಿಸುವ ಸಾಧ್ಯತೆಯೂ ಇದೆ. ನಂತರವೇ ಅವರು ‘ರಿಟರ್ನ್ ಟು ಪ್ಲೇ’ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.

23 ವರ್ಷದ ನಿತೀಶ್ ಕುಮಾರ್ ರೆಡ್ಡಿ ಇದುವರೆಗೆ ಭಾರತದ ಪರ 10 ಟೆಸ್ಟ್, 6 ಏಕದಿನ ಮತ್ತು 4 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದು, ಲಖನೌನಲ್ಲಿ ನಡೆದ ಎರಡನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com