

ಢಾಕಾ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿ ವಿವಾದ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.. ಸಲ್ಮಾನ್ ಅಲಿ ಅಘಾ ಅವರ ವಿವಾದಿತ ರನೌಟ್ ವಿಚಾರವಾಗಿ ಇದೀಗ ಮಾಜಿ ವೇಗಿ ಮಹಮದ್ ಆಮೀರ್ ಕಿಡಿಕಾರಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನಡೆದ ಸಲ್ಮಾನ್ ಅಲಿ ಅಘಾ ಅವರ ವಿವಾದಾತ್ಮಕ ರನ್-ಔಟ್ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆಮೀರ್, 'ಕ್ರಿಕೆಟ್ನಲ್ಲಿ ಅಂಪೈರಿಂಗ್ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮೆಹದಿ ಹಸನ್ ಅವರು ಅಘಾ ಕ್ರೀಸ್‌ಗೆ ಮರಳದಂತೆ ಅಡ್ಡಿಪಡಿಸಿದರು. ಇದನ್ನು ಅಂಪೈರ್‌ಗಳು ಗಮನಿಸಬೇಕಿತ್ತು ಎಂದು ಆಮೀರ್ ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ 'ಈ ರನ್-ಔಟ್ ನಿಯಮದ ಪ್ರಕಾರ ಸರಿ ಇರಬಹುದು. ಆದರೆ ಕ್ರಿಕೆಟ್‌ನ ‘ಕ್ರೀಡಾ ಸ್ಫೂರ್ತಿ’ಯ ದೃಷ್ಟಿಯಿಂದ ಇದು ತಪ್ಪು. ಬಾಂಗ್ಲಾದೇಶ ತಂಡವು ಸೌಜನ್ಯ ಮೆರೆಯಬಹುದಿತ್ತು. ಅಘಾ ಅವರನ್ನು ಬೌಲರ್ ತಡೆದಿದ್ದರಿಂದ, ಇದರ ಲಾಭವನ್ನು ಬ್ಯಾಟರ್‌ಗೆ ನೀಡಬೇಕಿತ್ತು.
ಆದರೆ ಇದ್ಯಾವುದನ್ನೂ ಅಂಪೈರ್ ಗಮನಿಸಲೇ ಇಲ್ಲ. ಕ್ರಿಕೆಟ್ ಎಂಬುದು ಜಂಟಲ್ಮ್ಯಾನ್ ಗೇಮ್. ಆದರೆ ಇಲ್ಲಿ ಬಾಂಗ್ಲಾದೇಶ್ ಆಟಗಾರ ಮೆಹದಿ ಹಸನ್ ಮಿರಾಝ್ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ. ಅವರು ಕ್ರಿಕೆಟ್‌ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ ಎಂದು ಮೊಹಮ್ಮದ್ ಅಮಿರ್ ಆಕ್ರೋಶ ಹೊರಹಾಕಿದ್ದಾರೆ.
ಆಗಿದ್ದೇನು?
ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮ್ಮದ್ ರಿಝ್ವಾನ್ ಹೊಡೆದ ಚೆಂಡನ್ನು ತಡೆಯಲು ಬೌಲರ್ ಮೆಹದಿ ಹಸನ್ ಮಿರಾಝ್ ಪ್ರಯತ್ನಿಸಿದರು. ಈ ವೇಳೆ ಕ್ರೀಸ್‌ನಿಂದ ಹೊರಗಿದ್ದ ಅಘಾ ಚೆಂಡು ಬೌಲರ್‌ಗೆ ನೀಡಲು ಮುಂದಾಗಿದ್ದರು. ಸಲ್ಮಾನ್ ಅಲಿ ಅಘಾ ಅವರು ಚೆಂಡನ್ನು ಎತ್ತಿ ಕೊಡಲು ಮುಂದಾದಾಗ, ಮೆಹದಿ ಹಸನ್ ಅವರು ತಕ್ಷಣವೇ ಚೆಂಡನ್ನು ಎತ್ತಿ ಸ್ಟಂಪ್‌ಗಳಿಗೆ ಎಸೆದರು.
ಅಘಾ ಕ್ರೀಸ್‌ನಿಂದ ಹೊರಗಿದ್ದ ಕಾರಣ ಮೂರನೇ ಅಂಪೈರ್ ಅವರನ್ನು ‘ಔಟ್’ ಎಂದು ಘೋಷಿಸಿದರು. ಅಂಪೈರ್ ತೀರ್ಪಿನಿಂದ ಕೆರಳಿದ ಸಲ್ಮಾನ್ ಅಲಿ ಅಘಾ ಕ್ರೀಸ್‌ನಲ್ಲೇ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದರು.
Advertisement