

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ಪ್ರಮುಖ ಪ್ರಕಟಣೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನ 2026ರ ಆವೃತ್ತಿಯನ್ನು ಮುಚ್ಚಿದ ಬಾಗಿಲುಗಳ ಹಿಂದೆ ನಡೆಸುವ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯಗಳನ್ನು ಕೇವಲ ಎರಡು ಸ್ಥಳಗಳಿಗೆ ಸೀಮಿತಗೊಳಿಸಿದೆ. ಮಾರ್ಚ್ 26 ರಂದು ಪಿಎಸ್ಎಲ್ ಪ್ರಾರಂಭವಾಗಲಿದ್ದು, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ತೀವ್ರ ತೊಂದರೆಗೆ ಸಿಲುಕಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಈ ಸಂಘರ್ಷವು ಹಲವಾರು ಏಷ್ಯಾದ ದೇಶಗಳಲ್ಲಿ ಇಂಧನ ಕೊರತೆಯನ್ನು ಉಂಟುಮಾಡಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರ ಇಂತಹ ಇಂತಹ ಕ್ರಮಗಳನ್ನು ಕೈಗೊಂಡಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಪಿಸಿಬಿಯನ್ನು ಟೀಕಿಸಿದ್ದಾರೆ.
ಇಂಧನ ಬಿಕ್ಕಟ್ಟಿನಿಂದಾಗಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಾಗರಿಕರು ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಶಾಲೆ ಮುಚ್ಚುವಿಕೆ, ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮತ್ತು ವಿಸ್ತೃತ ಈದ್ ರಜಾದಿನಗಳಂತಹ ಕ್ರಮಗಳನ್ನು ಪರಿಚಯಿಸಲಾಗಿದೆ. ಆದರೆ, ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಸದ್ಯಕ್ಕೆ ಅನಿಶ್ಚಿತವಾಗಿಯೇ ಉಳಿದಿದೆ.
'ಇಂಧನ ಬಿಕ್ಕಟ್ಟಿನ ಕಾರಣದಿಂದಾಗಿ ಎಲ್ಲ ಪಾಕಿಸ್ತಾನಿಗಳು ತಮ್ಮ ಚಲನವಲನಗಳನ್ನು ನಿರ್ಬಂಧಿಸುವಂತೆ ಪ್ರಧಾನಿ ವಿನಂತಿಸಿದ್ದಾರೆ. ನಾವು ಶಾಲೆಗಳನ್ನು ಮುಚ್ಚಿದ್ದೇವೆ, ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರಾರಂಭಿಸಿದ್ದೇವೆ ಮತ್ತು ಈದ್ ರಜಾದಿನಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಈ ಯುದ್ಧ ಎಷ್ಟು ಕಾಲ ನಡೆಯುತ್ತದೆ ಎಂಬುದು ನಮಗೆ ತಿಳಿದಿಲ್ಲ' ಎಂದು ನಖ್ವಿ ಹೇಳಿದ್ದಾರೆ.
ಭದ್ರತಾ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ ನಂತರ, ಪಿಎಸ್ಎಲ್ ನಿಗದಿಯಂತೆ ಮುಂದುವರಿಯುತ್ತದೆ. ಆದರೆ, ಸದ್ಯ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಡಲಾಗುತ್ತದೆ. ಉದ್ಘಾಟನಾ ಸಮಾರಂಭವನ್ನು ಸಹ ರದ್ದುಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಿಸಿಬಿಯನ್ನು ಅಣಕಿಸಿರುವ ಐಸ್ಲ್ಯಾಂಡ್ ಕ್ರಿಕೆಟ್, 'ಪಿಎಸ್ಎಲ್ ಬರುತ್ತಿದೆ ಮತ್ತು ಅದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ರೋಮಾಂಚನಕಾರಿಯಾಗಿದೆ. ಪಿಎಸ್ಎಲ್ ಏನನ್ನು ಸೂಚಿಸುತ್ತದೆ ಎಂದು ನಾವು ಯಾವಾಗಲೂ ಆಶ್ಚರ್ಯ ಪಡುತ್ತೇವೆ ಮತ್ತು ಅದು ಪೆಟ್ರೋಲ್ ಶಾರ್ಟೇಜ್ ಲೀಗ್ ಎಂದರ್ಥ' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾಲೆಳೆದಿದೆ.
ಬಳಿಕ ಪಿಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲಿಂಗ್‌ಗೆ ಗುರಿಯಾಗಿತು. ಕೆಲವು ಬಳಕೆದಾರರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮಿಲಿಟರಿ ಸಂಘರ್ಷವೇ ಈ ನಿರ್ಧಾರದ ಹಿಂದಿನ ನಿಜವಾದ ಕಾರಣ ಎಂದು ಹೇಳಿಕೊಂಡಿದ್ದಾರೆ.
Advertisement