

ಚೆನ್ನೈ: 'ಯಾರೂ ತಮ್ಮ ಮಗಳನ್ನು ನನ್ನೊಂದಿಗೆ ಮದುವೆ ಮಾಡಿಕೊಡಲು ಬಯಸುತ್ತಿರಲಿಲ್ಲ' ಎಂದು ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಎಲ್ ಶಿವರಾಮಕೃಷ್ಣನ್ ತಮ್ಮ ಖಿನ್ನತೆ, ಮದ್ಯದೊಂದಿಗಿನ ಹೋರಾಟವನ್ನು ವಿವರಿಸಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಕ್ರಿಕೆಟ್ ರಂಗಕ್ಕೆ ಪ್ರವೇಶಿಸಿದಾಗ ಎದುರಿಸಿದ ಏಕೈಕ ಸವಾಲೆಂದರೆ ಜನಾಂಗೀಯತೆ ಮಾತ್ರವೇ ಅಲ್ಲ. ಇನ್ನೂ ಸಾಕಷ್ಟು ವಿಚಾರಗಳಲ್ಲಿ ಅವರು ಹೋರಾಡಿದ್ದಾರೆ. ಈ ಪೈಕಿ ಮದುವೆ ಕೂಡ ಒಂದು ಎಂದು ಅವರು ಹೇಳಿದ್ದಾರೆ.
ಒಂದು ಕಾಲದಲ್ಲಿ ಭಾರತದ ಅತ್ಯುತ್ತಮ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟಿದ್ದ ಲೆಗ್-ಸ್ಪಿನ್ನರ್ ಶಿವರಾಮಕೃಷ್ಣನ್ ಹದಿಹರೆಯದವನಾಗಿದ್ದಾಗ "ಮದ್ಯ ವ್ಯಸನಿ" ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರು.
ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನದಲ್ಲಿ ಈ ವೃತ್ತಿ ಜೀವನದ ಏಳುಬೀಳುಗಳ ಕುರಿತು ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿರುವ ಲಕ್ಷ್ಮಣ್ ಶಿವರಾಮಕೃಷ್ಣನ್, ಕೇವಲ ವರ್ಣಭೇದ ನೀತಿ ಮಾತ್ರವಲ್ಲದೆ, ಹದಿಹರೆಯದಲ್ಲೇ ಎದುರಿಸಿದ ಸುಳ್ಳು ಆರೋಪಗಳು ಮತ್ತು ನಂತರ ಕಾಡಿದ ಖಿನ್ನತೆಯ ಬಗ್ಗೆಯೂ ಮಾತನಾಡಿದ್ದಾರೆ.
ಕೇವಲ 17ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಶಿವರಾಮಕೃಷ್ಣನ್, ಅಷ್ಟೇ ವೇಗವಾಗಿ ಟೀಕೆಗಳಿಗೂ ಗುರಿಯಾದರು.
19ನೇ ವಯಸ್ಸಿಗೆ ‘ಮದ್ಯವ್ಯಸನಿ’ ಪಟ್ಟ!
'ನಾನು 16 ರಿಂದ 19 ವರ್ಷದವನಾಗಿದ್ದಾಗ ವಿದೇಶಿ ಪ್ರವಾಸಗಳಲ್ಲಿದ್ದೆ. ಅಪ್ರಾಪ್ತ ವಯಸ್ಕನಾಗಿದ್ದ ನನಗೆ ಹೋಟೆಲ್‌ಗಳಲ್ಲಿ ಮದ್ಯ ನೀಡಲು ಹೇಗೆ ಸಾಧ್ಯ? ನಾನು ಜೀವನದಲ್ಲಿ ಎಂದೂ ಡ್ರಗ್ಸ್ ಸೇವಿಸಿಲ್ಲ. ಆದರೆ 19 ವರ್ಷದ ಹುಡುಗನನ್ನು ಕುಡುಕ, ಡ್ರಗ್ ಅಡಿಕ್ಟ್ ಎಂದು ಕರೆಯುವ ಮೂಲಕ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮಗಳ ಕೊಟ್ಟು ಮದುವೆ ಮಾಡಲು ಯಾರೂ ಸಿದ್ಧರಿರಲಿಲ್ಲ!
ಸುಳ್ಳು ಸುದ್ದಿಗಳು ಅವರ ವೈಯಕ್ತಿಕ ಜೀವನದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಿದ್ದವೆಂದರೆ, ಅಂತರಾಷ್ಟ್ರೀಯ ಕ್ರಿಕೆಟಿಗನಾಗಿದ್ದರೂ ಅವರಿಗೆ ಮದುವೆಯಾಗಲು ಹೆಣ್ಣು ಸಿಗುವುದು ಕಷ್ಟವಾಗಿತ್ತು. ನನ್ನ ತಂದೆ-ತಾಯಿ ಪತ್ರಿಕೆಯಲ್ಲಿ ವೈವಾಹಿಕ ಜಾಹೀರಾತು ನೀಡಿದ್ದರು.
ನಾನು ಟೆಸ್ಟ್ ಕ್ರಿಕೆಟಿಗ ಮತ್ತು ಸ್ವಂತ ಮನೆ ಹೊಂದಿದ್ದೇನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಎರಡು ವಾರಗಳ ನಂತರ ಬಾಕ್ಸ್ ತೆರೆದು ನೋಡಿದಾಗ ಒಂದೇ ಒಂದು ಅರ್ಜಿ ಬಂದಿರಲಿಲ್ಲ. ಸಮಾಜದಲ್ಲಿ ನನ್ನ ಹೆಸರನ್ನು ಎಷ್ಟು ಹಾಳು ಮಾಡಲಾಗಿತ್ತು ಎಂದರೆ, ಯಾರೂ ತಮ್ಮ ಮಗಳನ್ನು ನನಗೆ ನೀಡಲು ಸಿದ್ಧರಿರಲಿಲ್ಲ ಎಂದು ಶಿವರಾಮಕೃಷ್ಣನ್ ಹೇಳಿದ್ದಾರೆ.
ಆಯ್ಕೆಗಾರರ ಜೊತೆ ಸಂಘರ್ಷ ಮತ್ತು ಕ್ರಿಕೆಟ್ ಗೆ ವಿದಾಯ
ಅಂತೆಯೇ ಆಯ್ಕೆಗಾರರ ಜೊತೆಗಿನ ಸಂಘರ್ಷ ಮತ್ತು ಕ್ರಿಕೆಟ್ ಗೆ ವಿದಾಯ ಹೇಳಿದ ಸಂದರ್ಭದ ಕುರಿತು ಮಾತನಾಡಿದ ಅವರು, '1987ರ ವಿಶ್ವಕಪ್ ನಂತರ ಭಾರತ ತಂಡದಿಂದ ಕೈಬಿಟ್ಟ ರೀತಿ ಕೂಡ ಅಮಾನವೀಯವಾಗಿತ್ತು. ನನ್ನನ್ನು ಫಿಟ್ನೆಸ್ ಕಾರಣ ನೀಡಿ ತಂಡದಿಂದ ಹೊರಗಿಡಲಾಗಿದೆ ಎಂದು ಪತ್ರಿಕೆಗಳಿಗೆ ಸುಳ್ಳು ಹೇಳುವಂತೆ ಆಯ್ಕೆಗಾರರು ಕೇಳಿದರು. ಆದರೆ ನಾನು ನಿರಾಕರಿಸಿದೆ. ನಿಮಗೆ ಇಷ್ಟವಿದ್ದರೆ ನನ್ನನ್ನು ಕೈಬಿಡಿ, ನಾನು ಸುಳ್ಳು ಹೇಳುವುದಿಲ್ಲ ಎಂದಿದ್ದೆ ಎಂದು ಅವರು ಹೇಳಿದರು.
ಖಿನ್ನತೆ
ಕ್ರಿಕೆಟ್ ನಂತರ ಕಾಮೆಂಟೇಟರ್ ಆಗಿ ಗುರುತಿಸಿಕೊಂಡಿದ್ದ ಶಿವರಾಮಕೃಷ್ಣನ್ ಅವರಿಗೆ ಕೋವಿಡ್ ಲಾಕ್‌ಡೌನ್ ಸಮಯ ಅತಿದೊಡ್ಡ ಪೆಟ್ಟು ನೀಡಿತು. ಅವರು ತೀವ್ರ ಖಿನ್ನತೆಗೆ (Depression) ಒಳಗಾಗಿದ್ದರು. ನನಗೆ ಕನ್ನಡಿಯ ಮುಂದೆ ನಿಲ್ಲಲು ಅಸಹ್ಯವಾಗುತ್ತಿತ್ತು.
ನಿದ್ರೆ ಮಾಡಲು ಮದ್ಯದ ಮೊರೆ ಹೋಗುತ್ತಿದ್ದೆ. ದುಬೈನಲ್ಲಿ ವೇಗವಾಗಿ ವಾಹನ ಚಲಾಯಿಸುವಾಗ, ಬಾಗಿಲು ತೆರೆದು ಜಿಗಿದುಬಿಡೋಣ ಎಂಬ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು. ರಾತ್ರಿ ಕಣ್ಣು ಮುಚ್ಚಿದರೆ ಭಯಾನಕ ದೃಶ್ಯಗಳು ಕಾಡುತ್ತಿದ್ದವು ಎಂದು ತಮ್ಮ ಮಾನಸಿಕ ಹೋರಾಟವನ್ನು ವಿವರಿಸಿದ್ದಾರೆ.
ವಿಶ್ವದಾದ್ಯಂತ ಸ್ಪಿನ್ ಮ್ಯಾಜಿಕ್ ಮಾಡಿದ್ದ ಈ ಆಟಗಾರ, ಇಂದು ತಮ್ಮ ಜೀವನದ ಈ ಕರಾಳ ಪುಟಗಳನ್ನು ಬಿಚ್ಚಿಡುವ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಧ್ವನಿ ಎತ್ತಿದ್ದಾರೆ.
Advertisement