'ಮಾನಸಿಕವಾಗಿ ಬಳಲಿದ್ದೇನೆ, ಆದರೆ ಒತ್ತಡ ನಿಭಾಯಿಸುವ ಶಕ್ತಿ ನನಗಿದೆ': ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್!

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಗೆಲುವು ಹಾಗೂ 2026ರ ಟಿ20 ವಿಶ್ವಕಪ್ ಪ್ರಶಸ್ತಿಯ ಸಂಭ್ರಮ ಒಂದೆಡೆಯಾದರೆ..
Gautam Gambhir Admits He Is Mentally Drained
ಗೌತಮ್ ಗಂಭೀರ್
Updated on: 

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯೂ ಮುಕ್ತಾಯಗೊಂಡಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ನಿರಂತರವಾಗಿ ವಿವಿಧ ಮಾದರಿಯ ಕ್ರಿಕೆಟ್, ವಿಭಿನ್ನ ಪರಿಸ್ಥಿತಿಗಳು ಹಾಗೂ ಆಟಗಾರರ ವ್ಯಕ್ತಿತ್ವಗಳನ್ನು ನಿಭಾಯಿಸುವುದು ಮಾನಸಿಕವಾಗಿ ದಣಿಯುವಂತೆ ಮಾಡಿದೆ ಎಂದು ಗಂಭೀರ್ ಒಪ್ಪಿಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಗೆಲುವು ಹಾಗೂ 2026ರ ಟಿ20 ವಿಶ್ವಕಪ್ ಪ್ರಶಸ್ತಿಯ ಸಂಭ್ರಮ ಒಂದೆಡೆಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾದ ಆಘಾತಕಾರಿ ಸೋಲುಗಳು ಮತ್ತೊಂದೆಡೆ. ಆದರೆ, ಇಂತಹ ಒತ್ತಡವನ್ನು ಎದುರಿಸುವ ಸಾಮರ್ಥ್ಯ ತನಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 5ನೇ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಗೌತಮ್ ಗಂಭೀರ್, 'ಹೌದು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕೆಲವೊಮ್ಮೆ ಮಾನಸಿಕವಾಗಿ ಬಳಲಿದ್ದೇನೆ. ಆದರೆ ಅದನ್ನು ನಿಭಾಯಿಸುವಷ್ಟು ಮಾನಸಿಕವಾಗಿ ಸದೃಢನಾಗಿದ್ದೇನೆ. ಸಾಧ್ಯವಾದಷ್ಟು ಕಾಲ ಈ ಒತ್ತಡವನ್ನು ಎದುರಿಸುವ ಶಕ್ತಿ ನನಗಿದೆ. ನಾನು ಅಂತಹ ವ್ಯಕ್ತಿತ್ವದವನು.

ಒತ್ತಡವನ್ನು ಸಹಿಸಿಕೊಳ್ಳಬಲ್ಲೆ, ಎಂತಹ ಸವಾಲು ಎದುರಾದರೂ ಎದುರಿಸಲು ಸಿದ್ಧನಿದ್ದೇನೆ. ನಾನೂ ಒಬ್ಬ ಮನುಷ್ಯನಾಗಿರುವುದರಿಂದ ಕೆಲವೊಮ್ಮೆ ದಣಿವಾಗುವುದು ಸಹಜ. ಆದರೆ ಇಲ್ಲಿಯವರೆಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

Gautam Gambhir Admits He Is Mentally Drained
'ಇನ್ನೂ ಏನ್ ಮಾಡಬೇಕು?': ರನ್ ಹೊಳೆ ಹರಿಸಿದರೂ ODIನಲ್ಲಿ ಸ್ಥಾನವಿಲ್ಲ, ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ Yuvraj Singh!

ಜನಪ್ರಿಯ ನಿರ್ಧಾರಕ್ಕಿಂತ ಸರಿಯಾದ ನಿರ್ಧಾರ ಮುಖ್ಯ!

ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದರೂ ಅಂತಿಮ ಆಡುವ ಹನ್ನೊಂದರ ಬಳಗದಲ್ಲಿ ಕೆಲವರಿಗೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆಟಗಾರರಿಗೆ ತಮ್ಮ ನಿರ್ಧಾರವನ್ನು ಮನವರಿಕೆ ಮಾಡಿಕೊಡುವುದು ಕೋಚ್‌ಗೆ ಸವಾಲಿನ ಕೆಲಸ. ಈ ಬಗ್ಗೆ ಮಾತನಾಡಿದ ಗಂಭೀರ್, ಎಲ್ಲರಿಗೂ ಇಷ್ಟವಾಗುವ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಎಂದಿದ್ದಾರೆ.

"ಅದು ನನ್ನ ಕೆಲಸ. ಈ ಹಿಂದೆ ಕೂಡ ಹೇಳಿದ್ದೇನೆ. ನನ್ನ ಜವಾಬ್ದಾರಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೇ ಹೊರತು ಜನಪ್ರಿಯ ನಿರ್ಧಾರಗಳನ್ನಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಎಲ್ಲರಿಗೂ ಇಷ್ಟವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಆದರೆ, ನನ್ನ ಕೆಲಸ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರಿಗೆ ಭದ್ರತೆಯ ಭಾವನೆ ಮೂಡಿಸುವುದು. ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಬೆಂಬಲ ನೀಡುವುದು ಮತ್ತು ಅವರ ಪಾತ್ರದ ಬಗ್ಗೆ ಸ್ಪಷ್ಟತೆ ನೀಡುವುದು ನನ್ನ ಜವಾಬ್ದಾರಿ" ಎಂದು ಹೇಳಿದ್ದಾರೆ.

ಆಟಗಾರರೊಂದಿಗೆ ಪ್ರಾಮಾಣಿಕವಾಗಿರುವುದು ಮುಖ್ಯ!

ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯದ ಆಟಗಾರರೊಂದಿಗೆ ಮಾತನಾಡುವುದು ಯಾವಾಗಲೂ ಸುಲಭವಲ್ಲ ಎಂದು ಒಪ್ಪಿಕೊಂಡಿರುವ ಗಂಭೀರ್, ಮುಖ್ಯ ಕೋಚ್ ಆಗಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

"ಕೋಚ್ ಆಗಿ ಇಂತಹ ಮಾತುಕತೆಗಳು ಯಾವಾಗಲೂ ಕಷ್ಟಕರವಾಗಿರುತ್ತವೆ. ಪ್ರತಿಯೊಂದು ಅಂತಾರಾಷ್ಟ್ರೀಯ ತಂಡದಲ್ಲೂ ಸಾಕಷ್ಟು ಪ್ರತಿಭಾವಂತ ಆಟಗಾರರಿರುತ್ತಾರೆ. ನನ್ನ ಪ್ರಕಾರ ಆಟಗಾರರೊಂದಿಗೆ ಪ್ರಾಮಾಣಿಕವಾಗಿರುವುದು, ಯಾವುದೇ ವಿಷಯವನ್ನು ಮುಚ್ಚಿಡದೆ ನೇರವಾಗಿ ಹೇಳುವುದು ಮತ್ತು ಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಅದೇ ಮುಖ್ಯ ಕೋಚ್‌ನ ಜವಾಬ್ದಾರಿ. ನಾನು ಈ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ, ಯಾವುದೇ ಆಟಗಾರನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬಹುದು ಮತ್ತು ಅವರ ಯಾವುದೇ ಪ್ರಶ್ನೆಗೂ ಉತ್ತರಿಸಬಹುದು" ಎಂದು ಗಂಭೀರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X