

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ಗೆ 5ನೇ ಕ್ರಮಾಂಕಕ್ಕೆ ಭಡ್ತಿ ನೀಡಿ ತಂಡದ ಪ್ರಮುಖ ಬ್ಯಾಟರ್ ಕೆಎಲ್ ರಾಹುಲ್ಗೆ 6ನೇ ಸ್ಥಾನ ನೀಡಿದ್ದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿರುವ ಬದಲಾವಣೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ಗಿಂತ ಮೊದಲು ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಕ್ರಿಸ್ ಶ್ರೀಕಾಂತ್ ಅವರು, 'ರಾಹುಲ್ ಸಾಮಾನ್ಯ ಆಟಗಾರನಲ್ಲ ಬಣ್ಣಿಸಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ರಾಹುಲ್ ಮಾತ್ರ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ.
ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಪ್ರಮುಖರು. ಅಂತಹ ರಾಹುಲ್ ಅವರನ್ನು ಆರನೇ ಕ್ರಮಾಂಕಕ್ಕೆ ಇಳಿಸಿರುವುದು ಅನ್ಯಾಯ ಎಂದು ಶ್ರೀಕಾಂತ್ ಟೀಕಿಸಿದ್ದಾರೆ.
ಕೊಹ್ಲಿ-ರಾಹುಲ್ ತಂಡದ ಬೆನ್ನೆಲುಬು
'ಕಠಿಣ ಪರಿಸ್ಥಿತಿ ಎದುರಾದಾಗ ತಂಡದ ನೆರವಿಗೆ ಬರುವವರು ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಮಾತ್ರ. ಕಳೆದ ಪಂದ್ಯದಲ್ಲಿ ರಾಹುಲ್ ಬೇಗ ಔಟಾಗಿದ್ದರೆ ಭಾರತದ ಸ್ಥಿತಿ ಏನಾಗುತ್ತಿತ್ತು? ಅಕ್ಷರ್ ಪಟೇಲ್ ಅವರನ್ನು ಮೊದಲು ಕಳುಹಿಸಿ, ರಾಹುಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಆಡಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಗಂಭೀರ್ ಇದನ್ನು ಅರ್ಥಮಾಡಿಕೊಳ್ಳಬೇಕು.
ರಾಹುಲ್ ಪ್ರಮುಖ ಆಟಗಾರ. ಭಾರತ ಪರ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡಿದಾಗಲೇ ಶತಕಗಳನ್ನು ಗಳಿಸಿದ್ದಾರೆ. ಅಂತಹ ಆಟಗಾರನನ್ನು ಕೆಳ ಕ್ರಮಾಂಕಕ್ಕೆ ಇಳಿಸುವುದು ಸಂಪೂರ್ಣ ಅನ್ಯಾಯ' ಎಂದು ಶ್ರೀಕಾಂತ್ ಹೇಳಿದ್ದಾರೆ.
ಎಡಗೈ-ಬಲಗೈ ಜೋಡಿಗೆ ಆದ್ಯತೆ?
ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ರಾಹುಲ್ಗಿಂತ ಮೊದಲು ಕಳುಹಿಸಿದ್ದಕ್ಕೆ ಗೌತಮ್ ಗಂಭೀರ್ ನಿರ್ದಿಷ್ಟ ಕಾರಣ ನೀಡಿಲ್ಲ. ಆದರೆ, ಎಡಗೈ ಮತ್ತು ಬಲಗೈ ಬ್ಯಾಟರ್ಗಳ ಜೋಡಿಯನ್ನು ಕ್ರೀಸ್ನಲ್ಲಿ ಉಳಿಸುವ ತಂತ್ರದ ಭಾಗವಾಗಿ ಈ ಬದಲಾವಣೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಗುರ್ನೂರ್ ಬ್ರಾರ್ಗೆ ಶ್ರೀಕಾಂತ್ ಮೆಚ್ಚುಗೆ
ಇದೇ ವೇಳೆ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯುವ ವೇಗಿ ಗುರ್ನೂರ್ ಬ್ರಾರ್ ಅವರ ಪ್ರದರ್ಶನವನ್ನು ಶ್ರೀಕಾಂತ್ ಶ್ಲಾಘಿಸಿದ್ದಾರೆ. ಬ್ರಾರ್ 30 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
'ಗುರ್ನೂರ್ ಬ್ರಾರ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಬಲ್ಲರು. ಟಿ20 ಕ್ರಿಕೆಟ್ನಲ್ಲಿ ಮಾತ್ರ ಅವರಿಗೆ ಸಮಸ್ಯೆಯಿದೆ. ಯುವ ಭಾರತೀಯ ವೇಗಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಅನುಕೂಲಕರ ಪರಿಸ್ಥಿತಿ ಇದ್ದಾಗ ಭಾರತದ ವೇಗಿಗಳು ಯಾವಾಗಲೂ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಜಾವಗಲ್ ಶ್ರೀನಾಥ್ ಅವರ ಕಾಲದಿಂದಲೂ ಇದು ಮುಂದುವರಿದಿದೆ. ಆದರೆ, ಸಾಮಾನ್ಯ ಪಿಚ್ಗಳಲ್ಲಿ ಭಾರತದ ವೇಗಿಗಳು ಎದುರಾಳಿ ಬ್ಯಾಟರ್ಗಳಿಂದ ಸಾಕಷ್ಟು ರನ್ ಬಿಟ್ಟುಕೊಡುತ್ತಾರೆ' ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ತಲಾ 26 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಭಾರತ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ರಾಹುಲ್ 38 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮವಾಗಿ ಭಾರತ 4 ರನ್ಗಳಿಂದ ರೋಚಕ ಜಯ ಸಾಧಿಸಿತು.