4th ODI: 'ಯಾರೂ ಸುಲಭವಾಗಿ ವಿಕೆಟ್ ಒಪ್ಪಿಸಲ್ಲ, ಮ್ಯಾಟ್ ಹೆನ್ರಿ ಬೌಲಿಂಗ್ ಅದ್ಭುತವಾಗಿತ್ತು': ಭಾರತದ ಕುಸಿತಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.
Shreyas Iyer Explains India's Batting Collapse Against NZ
ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್
Updated on: 

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲಿನ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದ್ದು, 'ಯಾರೂ ಸುಲಭವಾಗಿ ವಿಕೆಟ್ ಒಪ್ಪಿಸಲ್ಲ, ಮ್ಯಾಟ್ ಹೆನ್ರಿ ಬೌಲಿಂಗ್ ಅದ್ಭುತವಾಗಿತ್ತು' ಎಂದು ಪರೋಕ್ಷ ಕಿಡಿಕಾರಿದ್ದಾರೆ.

ಶುಕ್ರವಾರ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ ಅವರ ಅಮೋಘ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 333 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಪೂರ್ಣ ಕುಸಿಯಿತು.

ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಹೆನ್ರಿ ತಮ್ಮ ಮಾರಕ ಬೌಲಿಂಗ್ ಮುಂದುವರಿಸಿ ಒಟ್ಟು ಆರು ವಿಕೆಟ್ ಕಬಳಿಸಿದರು. ಭಾರತದ ಪರ ಕೇವಲ ಮೂವರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಯಿತು.

ಉಳಿದವರು ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಭಾರತ 26.4 ಓವರ್ ನಲ್ಲೇ 89 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.

Shreyas Iyer Explains India's Batting Collapse Against NZ
4th ODI: ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಡಕೌಟ್; ಹೀನಾಯ ದಾಖಲೆ ಬರೆದ ಶ್ರೇಯಸ್ ಅಯ್ಯರ್

ಪಿಚ್‌ ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸ ಇತ್ತು

ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 'ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ಗಳ ವೇಳೆ ಪಿಚ್‌ನ ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸವಿತ್ತು. ಅದರಲ್ಲೂ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಎಸೆತದಿಂದಲೇ ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ್ದು ಅದ್ಭುತವಾಗಿತ್ತು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವಾಗ ಭಾರತ ತಂಡ ಹಲವು ರೀತಿಯ ಬೌಲಿಂಗ್ ತಂತ್ರಗಳನ್ನು ಪ್ರಯೋಗಿಸಿತ್ತು. ಶಾರ್ಟ್‌ ಬಾಲ್‌ಗಳನ್ನು ಎಸೆಯುವ ಮೂಲಕವೂ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಲಾಗಿತ್ತು. ಆದರೆ ಎದುರಾಳಿ ಆಟಗಾರರು ಉತ್ತಮವಾಗಿ ಬ್ಯಾಟ್ ಮಾಡಿದರು.

ನ್ಯೂಜಿಲೆಂಡ್ ತಂಡ 330 ರನ್ ಗಳಿಸಿದ ಬಳಿಕ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ ಎಂದು ತಮಗೆ ಅನಿಸಿತ್ತು. ಹೀಗಾಗಿ ಗುರಿ ಬೆನ್ನಟ್ಟುವಾಗ ಭಾರತ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ವಿಶ್ವಾಸವಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಚೆಂಡು ಪಿಚ್ ಮೇಲೆ ಬಿದ್ದು ಒಳಗೆ ಮತ್ತು ಹೊರಗೆ ಚಲಿಸುತ್ತಿದ್ದ ಕಾರಣ ಬ್ಯಾಟರ್‌ಗಳಿಗೆ ರನ್ ಗಳಿಸುವುದು ಕಷ್ಟವಾಯಿತು ಎಂದು ಅಯ್ಯರ್ ವಿವರಿಸಿದರು.

ಸುಲಭವಾಗಿ ಬೆನ್ನಟ್ಟಬಹುದು ಎಂದು ಭಾವಿಸಿದ್ದೆವು

“ನಾವು ಡ್ರೆಸ್ಸಿಂಗ್ ರೂಮ್‌ಗೆ ಬಂದಾಗ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದು ಎಂದು ಭಾವಿಸಿದ್ದೆವು. ಆದರೆ ಚೆಂಡು ಎರಡೂ ಕಡೆ ಸ್ವಿಂಗ್ ಆಗುತ್ತಿದ್ದ ಕಾರಣ ಹೇಗೆ ಆಡಬೇಕು ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಿತ್ತು. ವಿಕೆಟ್ ಕಳೆದುಕೊಂಡವರಲ್ಲಿ ಯಾರೂ ಅನಗತ್ಯವಾಗಿ ವಿಕೆಟ್ ಒಪ್ಪಿಸಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳು ಉತ್ತಮ ಎಸೆತಗಳನ್ನು ಹಾಕಿ ವಿಕೆಟ್ ಪಡೆದರು” ಎಂದು ಅಯ್ಯರ್ ಹೇಳಿದರು.

ಮ್ಯಾಟ್ ಹೆನ್ರಿ ಬೌಲಿಂಗ್‌ಗೆ ಶ್ರೇಯಸ್ ಮೆಚ್ಚುಗೆ

ಭಾರತದ ಬ್ಯಾಟಿಂಗ್ ಕುಸಿತಕ್ಕೆ ಪ್ರಮುಖ ಕಾರಣವಾದ ಮ್ಯಾಟ್ ಹೆನ್ರಿ ಬೌಲಿಂಗ್‌ ಅನ್ನು ಶ್ರೇಯಸ್ ವಿಶೇಷವಾಗಿ ಶ್ಲಾಘಿಸಿದರು. “ಮ್ಯಾಟ್ ಹೆನ್ರಿ ಮೊದಲ ಎಸೆತದಿಂದಲೇ ಸರಿಯಾದ ಜಾಗದಲ್ಲಿ ಚೆಂಡು ಹಾಕಿದರು. ಅವರ ಬೌಲಿಂಗ್ ನಿಜಕ್ಕೂ ಅದ್ಭುತವಾಗಿತ್ತು. ಅದಕ್ಕೆ ಅವರಿಗೆ ಮೆಚ್ಚುಗೆ ಸಲ್ಲಬೇಕು” ಎಂದರು. ಅಂತೆಯೇ ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಹಿನ್ನಡೆಯಾಯಿತು ಎಂದು ಒಪ್ಪಿಕೊಂಡ ಅಯ್ಯರ್, ಕ್ರಿಕೆಟ್‌ನಲ್ಲಿ ಇಂತಹ ತಪ್ಪುಗಳು ಸಹಜ ಎಂದರು.

Shreyas Iyer Explains India's Batting Collapse Against NZ
4th ODI: 26 ವರ್ಷಗಳಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಸೋಲು, ಆದರೂ 2 ಕಳಪೆ ದಾಖಲೆಗಳಿಂದ ಭಾರತ ಪಾರು!

ಮುಂದಿನ ಪಂದ್ಯಕ್ಕೆ ಹೊಸ ಉತ್ಸಾಹದೊಂದಿಗೆ ಸಿದ್ಧತೆ

ಸೋಲಿನ ಬಗ್ಗೆ ಹೆಚ್ಚು ಯೋಚಿಸದೆ ಮುಂದಿನ ಪಂದ್ಯಕ್ಕೆ ಸಿದ್ಧರಾಗುವುದು ಮುಖ್ಯ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು ಎಂದಿದ್ದಾರೆ.

“ಈ ಸೋಲನ್ನು ಮರೆತು ಮುಂದೆ ಸಾಗಬೇಕು. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸಬೇಕು. ಅದೇ ಸಮಯದಲ್ಲಿ ನಾವು ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದೇವೆ ಎಂಬುದನ್ನೂ ಮರೆಯಬಾರದು. ಆ ಗೆಲುವುಗಳಿಂದ ಸ್ಫೂರ್ತಿ ಪಡೆದು ಹೊಸ ಮನಸ್ಥಿತಿಯೊಂದಿಗೆ ಮುಂದಿನ ಪಂದ್ಯಕ್ಕೆ ಬರಬೇಕು” ಎಂದು ಅಯ್ಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X