IPLಗೆ ಧೋನಿ ವಿದಾಯ: 'ಮೆಂಟರ್ ಆಗಿ ಮಾಹಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ': ಪಾಕ್ ಮಾಜಿ ಕ್ರಿಕೆಟಿಗನ ಮೆಚ್ಚುಗೆ!

ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಮೆಂಟರ್ ಆಗಿ ಧೋನಿ ಇರುವುದರಿಂದ ಯುವ ಆಟಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಅವರ ಅನುಭವ ಮತ್ತು ಮಾರ್ಗದರ್ಶನ ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ, ಅಂತಾರಾಷ್ಟ್ರೀಯ..
MS Dhoni Gets Huge Compliment From Pakistan After IPL Playing Career With CSK Ends
ಎಂಎಸ್ ಧೋನಿ ಮತ್ತು ತಂಡ
Updated on: 

ನವದೆಹಲಿ: ಐಪಿಎಲ್‌ನಲ್ಲಿ ಆಟಗಾರನಾಗಿ ಎಂ.ಎಸ್. ಧೋನಿ ಅವರ ಸುದೀರ್ಘ ಪಯಣ ಅಂತ್ಯಗೊಂಡಿದ್ದು, 2027ರ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಈ ನಡುವೆ ಧೋನಿ ಅವರ ಮುಂದಿನ ಪಾತ್ರದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಮೆಂಟರ್ ಆಗಿ ಧೋನಿ ಇರುವುದರಿಂದ ಯುವ ಆಟಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

ಅವರ ಅನುಭವ ಮತ್ತು ಮಾರ್ಗದರ್ಶನ ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪ್ರಯೋಜನಕಾರಿಯಾಗಲಿದೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

ಐಎಎನ್‌ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಧೋನಿ ಅವರ ನಾಯಕತ್ವ ಮತ್ತು ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

MS Dhoni Gets Huge Compliment From Pakistan After IPL Playing Career With CSK Ends
IPLಗೆ ವಿದಾಯ: 'ನನ್ನ ಹೆಸರನ್ನೂ ಸೇರಿಸಿ'; MS ಧೋನಿ ಭಾವುಕ ಸಂದೇಶ ಕೇಳಿ CSK ಮ್ಯಾನೇಜ್ ಮೆಂಟ್ ಸ್ತಬ್ಧ!

ಧೋನಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ

"ಧೋನಿ ಯಶಸ್ವಿ ನಾಯಕನಾಗಿದ್ದರು. ಪ್ರಸಿದ್ಧ 7ನೇ ನಂಬರ್ ಜೆರ್ಸಿ ಧರಿಸಿ, ಹಳದಿ ಬಣ್ಣದ ಜೆರ್ಸಿಯಲ್ಲಿ ಆಡಿದ ಆಟಗಾರ. ಈಗ ಅವರು ಮೈದಾನದಲ್ಲಿ ಆಡದಿದ್ದರೂ, ಚೆಪಾಕ್ ಕ್ರೀಡಾಂಗಣದ ವಾತಾವರಣ ಅವರು ಆಡುತ್ತಿದ್ದ ದಿನಗಳಂತೆಯೇ ಇರಲಿದೆ ಎಂದು ನಾನು ಭಾವಿಸುತ್ತೇನೆ. ಮೆಂಟರ್ ಆಗಿ ಅವರ ಉಪಸ್ಥಿತಿ ಮುಂದಿನ ಪೀಳಿಗೆಯ ಆಟಗಾರರಿಗೆ ಖಂಡಿತವಾಗಿಯೂ ಅನುಕೂಲವಾಗಲಿದೆ" ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಸುಮಾರು 15 ವರ್ಷಗಳ ಕಾಲ ಧೋನಿ ಪ್ರಾಬಲ್ಯ ಮೆರೆದಿದ್ದರು. ಸಿಎಸ್‌ಕೆ ತಂಡದ ಪರವಾಗಿಯೂ ಹಲವು ಆಟಗಾರರಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಇದೀಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ಅನುಭವವನ್ನು ಹಂಚಿಕೊಳ್ಳುವುದರಿಂದ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

"ಧೋನಿ ಮಹಾನ್ ಆಟಗಾರನಾಗಿ ಬೆಳೆದಿದ್ದಾರೆ. ಅವರಿಂದ ಅನೇಕ ಆಟಗಾರರು ಸ್ಫೂರ್ತಿ ಪಡೆದಿದ್ದಾರೆ. ಈಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಳಿದುಕೊಂಡು ಮಾರ್ಗದರ್ಶನ ನೀಡುವ ಮೂಲಕ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನಷ್ಟು ಕೊಡುಗೆ ನೀಡಬಹುದು. ಪಾಕಿಸ್ತಾನ ಹೊರತುಪಡಿಸಿ ಹಲವು ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಾರೆ. ಹೀಗಾಗಿ ಅವರ ಪ್ರಭಾವ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿಸ್ತರಿಸಲಿದೆ. ಧೋನಿ ಅವರಿಗೆ ನಮ್ಮ ಶುಭಾಶಯಗಳು. ಅವರು ನಿಜವಾದ ಭಾರತೀಯ ಆಟಗಾರ" ಎಂದು ರಶೀದ್ ಲತೀಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಎಸ್‌ಕೆ ಪರ ಧೋನಿ ಸಾಧನೆ ಏನು?

ಎಂ.ಎಸ್. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಿಎಸ್‌ಕೆ ಪರ 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಧೋನಿ, ಐಪಿಎಲ್‌ನಲ್ಲಿ ಒಂದು ಫ್ರಾಂಚೈಸಿಯನ್ನು 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2022ರ ಸೀಸನ್‌ನಲ್ಲಿ ರವೀಂದ್ರ ಜಡೇಜಾ ಅವರಿಗೆ ನಾಯಕತ್ವ ಹಸ್ತಾಂತರಿಸಲಾಗಿತ್ತು. ಆದರೆ, ಕೆಲವೇ ಸಮಯದಲ್ಲಿ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಬಳಿಕ 2024ರಲ್ಲಿ ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದ್ದರು.

ಬ್ಯಾಟಿಂಗ್‌ನಲ್ಲೂ ಧೋನಿ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಫ್ರಾಂಚೈಸಿ ಪರ 5,314 ರನ್ ಗಳಿಸಿರುವ ಅವರು, ತಂಡದ ಎರಡನೇ ಗರಿಷ್ಠ ರನ್‌ಸ್ಕೋರರ್ ಎನಿಸಿಕೊಂಡಿದ್ದಾರೆ. ಅಲ್ಲದೆ, 272 ಪಂದ್ಯಗಳಲ್ಲಿ ಆಡಿರುವ ಧೋನಿ ಸಿಎಸ್‌ಕೆ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ.

ಅವರ ಹೆಲಿಕಾಪ್ಟರ್ ಶಾಟ್, ಕೊನೆಯ ಓವರ್‌ಗಳಲ್ಲಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಮತ್ತು ಹಲವು ರೋಚಕ ಗೆಲುವುಗಳು ಸಿಎಸ್‌ಕೆ ಅಭಿಮಾನಿಗಳ ಮನದಲ್ಲಿ ಸದಾ ಉಳಿಯಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X