ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಭಾರತ; ಹಲವು ದಾಖಲೆಗಳು ಪತನ!

ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಾದ ಅತಿ ಹೆಚ್ಚು ಇನಿಂಗ್ಸ್ ಮೊತ್ತ ಇದಾಗಿದೆ; 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 660/5 (ಡಿಕ್ಲೇರ್ಡ್) ಮೊತ್ತವನ್ನು ಇದು ಹಿಂದಿಕ್ಕಿದೆ.
Team India
ಟೀಂ ಇಂಡಿಯಾ ಆಟಗಾರರುPhoto | BCCI
Updated on: 

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದು, ಈ ವೇಳೆ ಹಲವು ದಾಖಲೆಗಳು ಪತನಗೊಂಡಿವೆ. ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಮೊದಲ ಏಳು ವಿಕೆಟ್‌ಗಳ ಪೈಕಿ ಪ್ರತಿಯೊಂದು ವಿಕೆಟ್‌ಗೂ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಪಾತ್ರವಾಗಿದೆ. ನ್ಯೂಜಿಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 368 ರನ್ ಗಳಿಸಿದರೆ, ಅದಕ್ಕೆ ಪ್ರತಿಯಾಗಿ ಭಾರತವು ಐತಿಹಾಸಿಕ 720/9 ರನ್‌ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ 352 ರನ್‌ಗಳ ಮುನ್ನಡೆ ಸಾಧಿಸಿತು. ಭಾರತದ ಇನಿಂಗ್ಸ್ ಆರಂಭದಲ್ಲಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ 130 ರನ್‌ಗಳ ಜೊತೆಯಾಟವಾಡಿತು.

ಎರಡನೇ ದಿನದಾಟದ ಅಂತ್ಯದ ವೇಳೆಗೆ ಜೈಸ್ವಾಲ್ 85 ರನ್‌ಗಳಿಗೆ ಔಟಾದ ನಂತರ, 136 ರನ್ ಗಳಿಸಿದ ರಾಹುಲ್, ದೇವದತ್ತ್ ಪಡಿಕ್ಕಲ್ (80) ಅವರೊಂದಿಗೆ ಸೇರಿ ಎರಡನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟವಾಡಿದರು.

ನಂತರ ಭಾರತದ ನಾಯಕ ಶುಭಮನ್ ಗಿಲ್ ತಮ್ಮ ಉಪನಾಯಕನೊಂದಿಗೆ ಕೈಜೋಡಿಸಿದರು. ರಾಹುಲ್ 136 ರನ್‌ಗಳಿಗೆ ಔಟ್ ಆಗುವ ಮೊದಲು, ಈ ಜೋಡಿಯು ಮೂರನೇ ವಿಕೆಟ್‌ಗೆ 91 ರನ್‌ಗಳನ್ನು ಕಲೆಹಾಕಿತು. ಮೂರನೇ ದಿನದಾಟದ ಅಂತ್ಯದ ವೇಳೆಗೆ ಬೌಲ್ಡ್ ಆದ ಗಿಲ್ ಅವರೊಂದಿಗೆ ರಿಷಬ್ ಪಂತ್ ಜೋಡಿಯು ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಬೇಸಿನ್ ರಿಸರ್ವ್‌ನಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಂದು, ರಿಷಬ್ ಪಂತ್ ಮತ್ತು 'ನೈಟ್‌ವಾಚ್‌ಮನ್' (ದಿನದಾಟದ ಅಂತ್ಯದಲ್ಲಿ ಕ್ರೀಸ್‌ಗೆ ಬಂದ ಬ್ಯಾಟರ್) ಅನ್ಶುಲ್ ಕಂಬೋಜ್ ಅವರು ಮೊದಲ ಒಂದು ಗಂಟೆಯ ಆಟದಲ್ಲೇ ವೇಗವಾಗಿ 75 ರನ್‌ಗಳ ಜೊತೆಯಾಟವಾಡಿದರು.

Team India
ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!

ಮತ್ತೆ ತಂಡಕ್ಕೆ ಮರಳಿದ್ದ ಪಂತ್, ಭೋಜನ ವಿರಾಮದ ಹೊತ್ತಿಗೆ 128 ರನ್‌ಗಳಿಗೆ ಔಟಾದರು. ಅವರು ಧ್ರುವ್ ಜುರೆಲ್ ಅವರೊಂದಿಗೆ 54 ರನ್‌ಗಳನ್ನು ಕಲೆಹಾಕಿದರು; ನಂತರ ಜುರೆಲ್ ಅವರು ವಾಷಿಂಗ್ಟನ್ ಸುಂದರ್ ಅವರೊಂದಿಗೆ ಮತ್ತೊಂದು 54 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ, ಭಾರತವು 700 ರನ್‌ಗಳ ಗಡಿಯನ್ನು ದಾಟಲು ನೆರವಾದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಾದ ಅತಿ ಹೆಚ್ಚು ಇನಿಂಗ್ಸ್ ಮೊತ್ತ ಇದಾಗಿದೆ; 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 660/5 (ಡಿಕ್ಲೇರ್ಡ್) ಮೊತ್ತವನ್ನು ಇದು ಹಿಂದಿಕ್ಕಿದೆ.

ಅಲ್ಲದೆ, ನ್ಯೂಜಿಲೆಂಡ್‌ನಲ್ಲಿ ದಾಖಲಾದ ಅತಿ ದೊಡ್ಡ ತಂಡದ ಮೊತ್ತವೂ ಇದಾಗಿದ್ದು, 2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ತಂಡ ಗಳಿಸಿದ್ದ 715/6 (ಡಿಕ್ಲೇರ್ಡ್) ಮೊತ್ತವನ್ನು ಇದು ಮೀರಿಸಿದೆ.

ಒಂದು ಟೆಸ್ಟ್ ಇನಿಂಗ್ಸ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಏಳು ಅಥವಾ ಅದಕ್ಕೂ ಹೆಚ್ಚು ವಿಕೆಟ್‌ಗಳ ಜೊತೆಯಾಟಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

ಈ ಸಾಧನೆಯನ್ನು ಭಾರತವು ಈ ಹಿಂದೆ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಾಡಿತ್ತು; ಆಗ ತಂಡವು ಒಂದೇ ಇನಿಂಗ್ಸ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಎಂಟು ಜೊತೆಯಾಟಗಳನ್ನು ದಾಖಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X