ಬೆಂಗಳೂರು: ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹ್ಯಾಟ್ರಿಕ್ ಕನಸಿಗೆ ಈಗ ಮತ್ತೊಂದು ದೊಡ್ಡ ಬಲ ಸಿಕ್ಕಿದೆ. ಐಪಿಎಲ್ 2027ರ ಆವೃತ್ತಿಯಲ್ಲಿ ತಾವು ಆಡಲು ಲಭ್ಯವಿರುವುದಾಗಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯ ನಡುವೆಯೂ ಹೇಜಲ್‌ವುಡ್ ತಂಡಕ್ಕೆ ಮರಳುತ್ತಿರುವುದು ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದ್ದು, ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಅನಿಶ್ಚಿತತೆಗೆ ತೆರೆ
2027ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಶಸ್ ಸರಣಿ ಮತ್ತು ಏಕದಿನ ವಿಶ್ವಕಪ್‌ನಂತಹ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ ಇರುವುದರಿಂದ, ಹೇಝಲ್‌ವುಡ್ ಐಪಿಎಲ್‌ನಿಂದ ಹೊರಗುಳಿಯಬಹುದು ಎಂಬ ಚರ್ಚೆಗಳಿದ್ದವು. ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಸೀಸ್ ಆಟಗಾರರು ಅಲಭ್ಯರಾಗುವ ಸಾಧ್ಯತೆ ಇರುವ ನಡುವೆಯೇ, ಹೇಝಲ್‌ವುಡ್ ತಾವು ಐಪಿಎಲ್‌ನ ಎಲ್ಲಾ ಪಂದ್ಯಗಳಿಗೆ ಲಭ್ಯವಿರುವುದಾಗಿ ಆರ್‌ಸಿಬಿ ಆಡಳಿತ ಮಂಡಳಿಗೆ ಖಚಿತಪಡಿಸಿದ್ದಾರೆ.
ಬೌಲಿಂಗ್ ವಿಭಾಗಕ್ಕೆ ಭಾರಿ ಬಲ
ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವ ಜೊತೆಗೆ ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಹೇಝಲ್‌ವುಡ್ ಅವರ ಉಪಸ್ಥಿತಿ ತಂಡಕ್ಕೆ ದೊಡ್ಡ ವರದಾನವಾಗಿದೆ. ಈಗಾಗಲೇ ತಂಡದಲ್ಲಿರುವ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ನುವಾನ್ ತುಷಾರ ಮತ್ತು ರಾಸಿಖ್ ದಾರ್ ಅವರೊಂದಿಗೆ ಹೇಝಲ್‌ವುಡ್ ಸೇರಿಕೊಳ್ಳುವುದರಿಂದ ಆರ್‌ಸಿಬಿ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಿದೆ. ಏತನ್ಮಧ್ಯೆ, ಹೇಝಲ್‌ವುಡ್ ಇದುವರೆಗೆ 52 ಐಪಿಎಲ್ ಪಂದ್ಯಗಳನ್ನಾಡಿದ್ದು, 72 ವಿಕೆಟ್‌ಗಳನ್ನು ಕಬಳಿಸಿದ್ದಾರೆ (ಸರಾಸರಿ 23.47, ಎಕಾನಮಿ 8.62)
ಮಿನಿ ಹರಾಜಿನ ಸಿದ್ಧತೆ
ಡಿಸೆಂಬರ್ 16, 2026 ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಒಟ್ಟು 20 ಆಟಗಾರರನ್ನು ಉಳಿಸಿಕೊಂಡು, ಜೇಕಬ್ ಬೆಥೆಲ್ ಸೇರಿದಂತೆ 6 ಆಟಗಾರರನ್ನು ಬಿಡುಗಡೆ ಮಾಡಿದೆ. ಸದ್ಯ ಆರ್‌ಸಿಬಿ ಪರ್ಸ್‌ನಲ್ಲಿ ₹14.15 ಕೋಟಿ ಉಳಿದಿದೆ.
ಆರ್‌ಸಿಬಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಪಟ್ಟಿ:
ನವೆಂಬರ್ 17, 2026 ರಂದು ಪ್ರಕಟವಾದ ಅಂತಿಮ ಪಟ್ಟಿಯ ಪ್ರಕಾರ, ಆರ್‌ಸಿಬಿ ತನ್ನ ಚಾಂಪಿಯನ್ ತಂಡದ ಪ್ರಮುಖ 20 ಆಟಗಾರರನ್ನು ಉಳಿಸಿಕೊಂಡಿದೆ:
ಉಳಿಸಿಕೊಂಡ ಆಟಗಾರರು (20): ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಫಿಲ್ ಸಾಲ್ಟ್ (ವಿದೇಶಿ), ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಟಿಮ್ ಡೇವಿಡ್ (ವಿದೇಶಿ), ರೊಮಾರಿಯೊ ಶೆಫರ್ಡ್ (ವಿದೇಶಿ), ಜೋರ್ಡಾನ್ ಕಾಕ್ಸ್ (ವಿದೇಶಿ), ಕೃನಾಲ್ ಪಾಂಡ್ಯ, ಜೋಶ್ ಹೇಝಲ್‌ವುಡ್ (ವಿದೇಶಿ), ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ದಾರ್, ನುವಾನ್ ತುಷಾರ (ವಿದೇಶಿ), ಜೇಕಬ್ ಡಫಿ (ವಿದೇಶಿ), ಸುಯಶ್ ಶರ್ಮಾ, ವಿಕ್ಕಿ ಓಸ್ತ್ವಾಲ್, ಅಭಿನಂದನ್ ಸಿಂಗ್ ಮತ್ತು ಕನಿಷ್ಕ್ ಚೌಹಾಣ್.
ಬಿಡುಗಡೆ ಮಾಡಿದ ಆಟಗಾರರು (6): ಮಂಗೇಶ್ ಯಾದವ್ (₹5.20 ಕೋಟಿ), ಜೇಕಬ್ ಬೆಥೆಲ್ (₹2.60 ಕೋಟಿ - ಮೊಣಕಾಲು ಶಸ್ತ್ರಚಿಕಿತ್ಸೆ ಹಿನ್ನೆಲೆ), ರಿಚರ್ಡ್ ಗ್ಲೀಸನ್ (₹1.60 ಕೋಟಿ), ಸ್ವಪ್ನಿಲ್ ಸಿಂಗ್ (₹50 ಲಕ್ಷ), ವಿಹಾನ್ ಮಲ್ಹೋತ್ರಾ (₹30 ಲಕ್ಷ) ಮತ್ತು ಸಾತ್ವಿಕ್ ದೇಸ್ವಾಲ್ (₹30 ಲಕ್ಷ).