'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ': Agarkarಗೆ ಗೇಟ್ ಪಾಸ್; ಗಂಭೀರ್‌ ಭಾವುಕ ಸಂದೇಶ!

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಇತ್ತೀಚೆಗೆ ನಿರ್ಗಮಿಸಿದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಅವರಿಗೆ ಭಾವುಕ ಸಂದೇಶ ರವಾನಿಸಿದ್ದಾರೆ.
Gautam Gambhir's Post For Ajit Agarkar Takes Internet By Storm
ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್
Updated on: 

ಮುಂಬೈ: ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರನ್ನು ಮುಂದುವರೆಸುವ ಕುರಿತು ಬಿಸಿಸಿಐ ನಕಾರ ವ್ಯಕ್ತಪಡಿಸಿದೆ ಎಂದು ಸುದ್ದಿಗಳ ನಡುವೆಯೇ ಇತ್ತ ಮುಖ್ಯ ಕೋಚ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

ಹೌದು.. ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಇತ್ತೀಚೆಗೆ ನಿರ್ಗಮಿಸಿದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಅವರಿಗೆ ಭಾವುಕ ಸಂದೇಶ ರವಾನಿಸಿದ್ದಾರೆ.

ಆಯ್ಕೆ ವಿಚಾರಗಳಲ್ಲಿ ಅಗರ್ಕರ್‌ ಜತೆ ನಿಕಟವಾಗಿ ಕೆಲಸ ಮಾಡಿದ್ದ ಗಂಭೀರ್‌, ತಂಡಕ್ಕೆ ಯುವ ಪ್ರತಿಭೆಗಳನ್ನು ಬೆಳೆಸುವ ವ್ಯವಸ್ಥೆ ರೂಪಿಸುವಲ್ಲಿಯೂ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಅಗರ್ಕರ್‌ ಮುಖ್ಯ ಆಯ್ಕೆಗಾರರಾಗಿದ್ದ ಅವಧಿಯಲ್ಲಿ ಭಾರತ ತಂಡ ಎರಡು ಟಿ20 ವಿಶ್ವಕಪ್‌ ಹಾಗೂ ಒಂದು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಂಡಿತ್ತು.

ಆದರೆ ಅವರ ಅಧಿಕಾರಾವಧಿಯ ಅಂತಿಮ ಹಂತದಲ್ಲಿ ಹಲವು ವಿವಾದಗಳು ಹಾಗೂ ಟೀಕೆಗಳು ಅವರನ್ನು ಸುತ್ತುವರಿದಿದ್ದವು. ಇದನ್ನು ಉಲ್ಲೇಖಿಸಿರುವ ಗಂಭೀರ್‌, "ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ" ಎಂದು ಅಗರ್ಕರ್‌ಗೆ ಹೇಳಿದ್ದಾರೆ.

Gautam Gambhir's Post For Ajit Agarkar Takes Internet By Storm
ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!

'ತಂಡವೇ ಮೊದಲು, ತಂಡವೇ ಮುಖ್ಯ'

ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಅಗರ್ಕರ್‌ ಅವರನ್ನು ಉದ್ದೇಶಿಸಿ ಬರೆದಿರುವ ಗಂಭೀರ್‌, ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

"ಆತ್ಮೀಯ ಅಜಿತ್‌ ಭಾಯ್‌, ನಿಮ್ಮೊಂದಿಗೆ ಕೆಲಸ ಮಾಡಿದ್ದು ನನಗೆ ಅತ್ಯಂತ ಗೌರವದ ವಿಷಯ. ಆ ಮೂರು ಐಸಿಸಿ ಟ್ರೋಫಿಗಳೇ ನಿಮ್ಮ ಬದ್ಧತೆಗೆ ಸಾಕ್ಷಿ. ಯಾವಾಗಲೂ ತಂಡವೇ ಮೊದಲು, ತಂಡವೇ ಮುಖ್ಯ ಎಂಬ ನಿಲುವು ನಿಮ್ಮದಾಗಿತ್ತು. ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ ಎಂದು ನಾನು ಹೇಳಲೇಬೇಕು. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು," ಎಂದು ಗಂಭೀರ್‌ ಬರೆದಿದ್ದಾರೆ.

ರೋಹಿತ್‌-ಕೊಹ್ಲಿ ನಿವೃತ್ತಿ ಬಳಿಕ ವಿವಾದ

ಅಗರ್ಕರ್‌ ಅವರ ಯಶಸ್ವಿ ಅವಧಿಗೆ ಟೆಸ್ಟ್‌ ಕ್ರಿಕೆಟ್‌ನಿಂದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ನಿವೃತ್ತಿ ಘೋಷಿಸಿದ ಬೆಳವಣಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಇದರ ಬೆನ್ನಲ್ಲೇ ರೋಹಿತ್‌ ಅವರನ್ನು ಭಾರತದ ಏಕದಿನ ತಂಡದಿಂದ ಹಂತಹಂತವಾಗಿ ದೂರ ಮಾಡುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ತಂಡದ ಅಗ್ರ ಕ್ರಮಾಂಕದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಅಗರ್ಕರ್‌ ಅವರದ್ದಾಗಿತ್ತು ಎಂಬ ವರದಿಗಳು ಹರಿದಾಡಿದ್ದವು.

ಆದರೆ ಬಿಸಿಸಿಐ ಕಾರ್ಯದರ್ಶಿ ದಾವಿಜಿತ್‌ ಸೈಕಿಯಾ ಅವರು ರೋಹಿತ್‌ ಮುಂದಿನ ವರ್ಷದ ವಿಶ್ವಕಪ್‌ವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಮುಂದುವರಿಯಬೇಕು ಎಂಬ ನಿಲುವಿಗೆ ಬೆಂಬಲ ನೀಡಿದ್ದರು.

ಈ ಬೆಳವಣಿಗೆಯೇ ಬಿಸಿಸಿಐ ಮತ್ತು ಅಗರ್ಕರ್‌ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂಬ ವರದಿಗಳೂ ಕೇಳಿಬಂದಿದ್ದವು. ಅಂತಿಮವಾಗಿ ಅಗರ್ಕರ್‌ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದರು.

ಅಗರ್ಕರ್‌ ಎದುರಿಸಿದ ಒತ್ತಡ ಹಾಗೂ ಟೀಕೆಗಳನ್ನು ಹತ್ತಿರದಿಂದ ಕಂಡಿರುವ ಗಂಭೀರ್‌, ಇದೀಗ ಅವರ ಪರವಾಗಿ ನಿಂತು ಭಾವುಕ ಸಂದೇಶ ನೀಡಿರುವುದು ಕ್ರಿಕೆಟ್‌ ವಲಯದಲ್ಲಿ ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com