

ಜೈಲಿನಲ್ಲಿರುವ ಪಾಕಿಸ್ತನಾ ಕ್ರಿಕೆಟ್ ಮಾಜಿ ನಾಯಕ ಇಮ್ರಾನ್ ಖಾನ್ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತೆ ಪಾಕಿಸ್ತಾನದ ಅಧಿಕಾರಿಗಳನ್ನು ಒತ್ತಾಯಿಸುವ ನಿಟ್ಟಿನಲ್ಲಿ ಬೆಂಬಲ ಕೋರಿ, ಆಸ್ಟ್ರೇಲಿಯಾದ ಒಟ್ಟು ಏಳು ಮಂದಿ ಮಾಜಿ ನಾಯಕರು ತಮ್ಮ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಮ್ರಾನ್ ಅವರನ್ನು ಮಾನವೀಯತೆಯಿಂದ ನಡೆಸಿಕೊಳ್ಳುವಂತೆ ಕೋರಿ 22 ಅಂತಾರಾಷ್ಟ್ರೀಯ ನಾಯಕರು ಈ ಹಿಂದೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ ಆಸ್ಟ್ರೇಲಿಯಾದ ಹಲವು ದಿಗ್ಗಜರು ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳಲು ಕೈಜೋಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಯೋಗಕ್ಷೇಮದ ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸುವಂತೆ ಕೋರಿ ಆಸ್ಟ್ರೇಲಿಯನ್ ಮಾಜಿ ನಾಯಕರು ಮಂಗಳವಾರ ಆ ದೇಶದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರಕ್ಕೆ ಕಳುಹಿಸಲಾದ ಪತ್ರದಲ್ಲಿ ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ ಪತ್ರದಲ್ಲಿ ಸಹಿ ಹಾಕಿದ್ದಾರೆ.
'ಇಮ್ರಾನ್ ಖಾನ್ ವಿರುದ್ಧದ ಕಾನೂನು ಅಥವಾ ರಾಜಕೀಯ ಪ್ರಕರಣದ ಕುರಿತು ತಾವು ಯಾವುದೇ ನಿಲುವನ್ನು ಹೊಂದಿಲ್ಲ. ಇದು ಪಾಕಿಸ್ತಾನವೇ ಸ್ವತಃ ಬಗೆಹರಿಸಿಕೊಳ್ಳಬೇಕಾದ ವಿಷಯ. ಆದಾಗ್ಯೂ, ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿ ಇಮ್ರಾನ್ ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ; 'ಅವರ ರಾಜಕೀಯ ನಿಲುವು ಏನೇ ಇರಲಿ, ಇದು ಮೂಲಭೂತ ಮಾನವೀಯತೆಗೆ ಸಂಬಂಧಿಸಿದ ವಿಷಯ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾದ ಗ್ರೆಗ್ ಚಾಪೆಲ್, ಸೆನೆಟರ್ ಪೆನ್ನಿ ವಾಂಗ್ ಅವರನ್ನು ಭೇಟಿಯಾಗಲು ಕೋರಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕನ ಪುತ್ರ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ತಂದೆಯ ಜೀವಕ್ಕೆ ಗಂಭೀರ ಬೆದರಿಕೆಯಿದೆ ಎಂದು ಆರೋಪಿಸಿದ ನಂತರ, ಇಮ್ರಾನ್ ಅವರ ಪ್ರಕರಣದ ಕುರಿತು ಚರ್ಚಿಸಲು ಅವರು ಈ ಭೇಟಿಯನ್ನು ಬಯಸಿದ್ದಾರೆ.
ಏಳು ಮಂದಿ ನಾಯಕರು ಬರೆದಿರುವ ಪತ್ರದಲ್ಲಿ, 'ಗ್ರೆಗ್ ಚಾಪೆಲ್ 2022ರಲ್ಲಿ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ಕೊನೆಯದಾಗಿ ಭೇಟಿಯಾಗಿದ್ದರು; ಆಗ ಖಾನ್ ಅವರು ಪ್ರಧಾನಿಯಾಗಿದ್ದು, ಆರೋಗ್ಯವಂತರಾಗಿ ಮತ್ತು ದೃಢಕಾಯರಾಗಿದ್ದರು. ಅವರ ಬಂಧನದ ಕುರಿತು ಈಗ ಹೊರಬರುತ್ತಿರುವ ವರದಿಗಳೊಂದಿಗೆ ಆ ಚಿತ್ರಣವನ್ನು ಹೊಂದಿಸಿ ನೋಡುವುದು ಕಷ್ಟಕರವಾಗಿದೆ. ಹೀಗಾಗಿಯೇ, ನಾವು ರಾಜತಾಂತ್ರಿಕರಾಗಿಯೋ ಅಥವಾ ರಾಜಕೀಯ ವ್ಯಕ್ತಿಗಳಾಗಿಯೋ ಅಲ್ಲದೆ, ಧ್ವನಿ ಎತ್ತುವುದು ಅಗತ್ಯವೆಂದು ಭಾವಿಸಿದ ಆಸ್ಟ್ರೇಲಿಯಾದ ಮಾಜಿ ನಾಯಕರಾಗಿ ಇಂದು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
'ಖಾನ್ ಅವರು ಪಾಕಿಸ್ತಾನಕ್ಕೆ ಏಕೈಕ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟರು. ಅವರು ಪ್ರಧಾನ ಮಂತ್ರಿಯಾಗಿಯೂ ತಮ್ಮ ದೇಶವನ್ನು ಮುನ್ನಡೆಸಿದರು. ಆಸ್ಟ್ರೇಲಿಯನ್ನರು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ; ಏಕೆಂದರೆ, ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಕೌಶಲ ಮತ್ತು ನಾಯಕತ್ವದ ಮೂಲಕ ಅಳಿಯದ ಛಾಪು ಮೂಡಿಸಿದ ಕ್ರಿಕೆಟಿಗರಾಗಿಯೂ ಹಾಗೂ ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಿ ಜನರ ಜೀವನಮಟ್ಟ ಸುಧಾರಿಸಲು ನೆರವಾದ ವ್ಯಕ್ತಿಯಾಗಿಯೂ ಅವರು ಗುರುತಿಸಲ್ಪಟ್ಟಿದ್ದಾರೆ' ಎಂದು ತಿಳಿಸಲಾಗಿದೆ.
'ಹಿಂದೂಸ್ತಾನ್ ಟೈಮ್ಸ್' ಜೊತೆಗಿನ ಸಂಭಾಷಣೆಯಲ್ಲಿ, ಇಮ್ರಾನ್ ವಿರುದ್ಧದ ರಾಜಕೀಯ ಪ್ರಕರಣವು ತಮಗೆ ಅಥವಾ ಸಹಿ ಹಾಕಿದ ಇತರರಿಗೆ ಕಳವಳದ ವಿಷಯವಲ್ಲ. ಆದರೆ, ಬಂಧನದಲ್ಲಿರುವಾಗ ಅವರಿಗೆ ಮಾನವೀಯವಾಗಿ ನಡೆಸಿಕೊಳ್ಳಬೇಕು ಎಂದು ಗ್ರೆಗ್ ಚಾಪೆಲ್ ಒತ್ತಿಹೇಳಿದರು.
'ವಿಶ್ವಾಸಾರ್ಹ ವರದಿಗಳಲ್ಲದೆ, ಅವರ ಪುತ್ರ ಮತ್ತು ಸಹೋದರಿಯರು ಕೂಡ ಅವರ ಆರೋಗ್ಯ ಹಾಗೂ ಬಂಧನದಲ್ಲಿನ ಚಿಕಿತ್ಸೆಯ ಕುರಿತು ತಿಂಗಳುಗಳಿಂದ ಸಾರ್ವಜನಿಕವಾಗಿ ಮನವಿ ಮಾಡುತ್ತಾ ಬಂದಿದ್ದಾರೆ; ಸೀಮಿತ ವೈದ್ಯಕೀಯ ಆರೈಕೆ, ಕುಟುಂಬದೊಂದಿಗಿನ ಸಂಪರ್ಕದ ಮೇಲಿನ ನಿರ್ಬಂಧಗಳು ಮತ್ತು ಕಾನೂನು ಸಲಹೆ ಪಡೆಯುವಲ್ಲಿನ ಅಡಚಣೆಗಳು ಅವರ ಪ್ರಮುಖ ಕಳವಳಗಳಾಗಿವೆ. ಅವರ ವಿರುದ್ಧದ ಕಾನೂನು ಅಥವಾ ರಾಜಕೀಯ ಪ್ರಕರಣದ ಕುರಿತು ನಾವು ಯಾವುದೇ ನಿಲುವನ್ನು ಹೊಂದಿಲ್ಲ; ಅದು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯ. ಆದರೆ, ವ್ಯಕ್ತಿಯ ರಾಜಕೀಯ ನಿಲುವು ಏನೇ ಇರಲಿ, ಬಂಧನದಲ್ಲಿರುವ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿಯು ಮೂಲಭೂತ ಮಾನವೀಯತೆಗೆ ಸಂಬಂಧಿಸಿದ ವಿಷಯ' ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರ ಬರೆಯುವ ಅಗತ್ಯದ ಕುರಿತು ಕೇಳಿದಾಗ ಚಾಪೆಲ್, 'ಅವರು (ಇಮ್ರಾನ್ ಖಾನ್) ಜೈಲಿನಲ್ಲಿಯೇ ಮೃತಪಡಬಹುದು ಎಂಬ ಆತಂಕ ನಮಗಿದೆ' ಎಂದರು.
'ಅಂತರರಾಷ್ಟ್ರೀಯ ತಂಡಗಳ ನಾಯಕರು ಈ ಕಳವಳವನ್ನು ವ್ಯಕ್ತಪಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ಆರು ತಿಂಗಳುಗಳಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ; ಅಂದಿನಿಂದ ಬಂದಿರುವ ವರದಿಗಳು — ಹಾಗೂ ಈಗ ಅವರ ಕುಟುಂಬದವರೇ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು — ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಆಸ್ಟ್ರೇಲಿಯಾ ಸರ್ಕಾರ ಈ ವಿಷಯವನ್ನು ಪಾಕಿಸ್ತಾನದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನೇರವಾಗಿ ಪ್ರಸ್ತಾಪಿಸಿದರೆ ನಾವು ಕೃತಜ್ಞರಾಗಿರುತ್ತೇವೆ. ಇತ್ತೀಚಿನ ವಾರಗಳಲ್ಲಿ ಚಾಪೆಲ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಭೇಟಿಯಾಗಲು ಕೋರಿದ್ದಾರೆ ಮತ್ತು ನಮ್ಮ ಪರವಾಗಿ ನಿಮ್ಮೊಂದಿಗೆ ನೇರವಾಗಿ ಚರ್ಚಿಸುವ ಅವಕಾಶವನ್ನು ಅವರು ಸ್ವಾಗತಿಸುತ್ತಾರೆ. ಈ ವಿಷಯವನ್ನು ಪರಿಗಣಿಸಲು ಸಮಯ ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು' ಎಂದು ಪತ್ರದಲ್ಲಿ ತಿಳಿಸಲಾಗಿದೆ.