

ಬೆಂಗಳೂರು: ವಾರ್ಡ್ ಮೀಸಲು ಪಟ್ಟಿ ಅಂತಿಮಗೊಳಿಸಿರುವ ಸರ್ಕಾರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸೋಮವಾರ ಸಲ್ಲಿಸಿದೆ. ಕರಡು ಪಟ್ಟಿಯಲ್ಲಿ ಪ್ರಕಟಿಸಿದ್ದ ಮೀಸಲಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಒಟ್ಟು 45 ವಾರ್ಡ್‍ಗಳ ಮೀಸಲು ಬದಲಾಗಿದೆ.
ಬಿಬಿಎಂಪಿಯನ್ನು ಮೂರು ಭಾಗವಾಗಿಸುವ ಗೊಂದಲದ ನಡುವೆಯೇ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದಂತೆ ಅಂತಿಮ ಪಟ್ಟಿಯನ್ನು ಸಕಾಲದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಏ.4ರಂದು ಕರಡು ಮೀಸಲು ಪಟ್ಟಿ ಪ್ರಕಟವಾದಾಗ ಶೇ.80ರಷ್ಟು ಬಿಜೆಪಿ ಸದಸ್ಯರಿಗೆ ಅನ್ಯಾಯವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಮೇಯರ್ ಶಾಂತಕುಮಾರಿ ಸೇರಿದಂತೆ ಹಳೆಯ ಮೇಯರ್‍ಗಳೂ ಸ್ಪರ್ಧಿಸದಂತೆ ಮಾಡಲಾಗಿದೆ ಎಂದು ಖಂಡನೆ ವ್ಯಕ್ತವಾಗಿತ್ತು.
ಮಹಿಳಾ ಮೀಸಲು ಒಂದೇ ಒಂದು ಕಡಿತ!
ಕರಡು ಪಟ್ಟಿಯಲ್ಲಿ ಒಟ್ಟು 198 ವಾರ್ಡ್‍ಗಳಲ್ಲಿ 97 ವಾರ್ಡ್‍ಗಳಿಗೆ ವಿವಿಧ ವರ್ಗಗಳಡಿ ಮಹಿಳಾ ಮೀಸಲು ನೀಡಲಾಗಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಒಂದು ಮೀಸಲನ್ನು ಕಡಿತಗೊಳಿಸಿ 96
ಮೀಸಲು ಮಾತ್ರ ನೀಡಲಾಗಿದೆ. ಹಾಲಿ ಪುರುಷ ಸದಸ್ಯರ ವಾರ್ಡ್‍ಗಳಲ್ಲಿ ಮಹಿಳಾ ಮೀಸಲು ನೀಡಿ ಟೀಕೆಗೊಳಗಾಗಿದ್ದ ಸರ್ಕಾರ ಅಂತಿಮವಾಗಿ ಕೆಲವನ್ನು ಮಾತ್ರ ಅದಲು-ಬದಲು ಮಾಡಿದೆ. ಈ ಬದಲಾವಣೆಯಲ್ಲಿ ಒಂದು ಮಹಿಳಾ ಮೀಸಲು ಸ್ಥಾನವನ್ನು ಕಡಿತಗೊಳಿಸಲಾಗಿದೆ. ಶೇ.50ರಷ್ಟು ಮೀಸಲನ್ನು ಅಂತಿಮ ಪಟ್ಟಿಯಲ್ಲೂ ನೀಡಿಲ್ಲ.
ಮಹಿಳಾ ಮೀಸಲು ಸಂಖ್ಯೆ
ಸಾಮಾನ್ಯ 52
ಪರಿಶಿಷ್ಟ ಜಾತಿ 10
ಪರಿಶಿಷ್ಟ ಪಂಗಡ 2
ಹಿಂದುಳಿದ ವರ್ಗ `ಎ' 26
ಹಿಂದುಳಿದ ವರ್ಗ `ಬಿ' 6
ಒಟ್ಟು 96
ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಬಿಬಿಎಂಪಿ ಚುನಾವಣೆಯ ಅಂತಿಮ ಮೀಸಲು ಪಟ್ಟಿ ಸಲ್ಲಿಸಿದೆ. ಬಿಬಿಎಂಪಿ ಮೂರು ಭಾಗವಾಗಿಸುವ ಪ್ರಕ್ರಿಯೆಯಿಂದ ಚುನಾವಣಾ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಹೈಕೋರ್ಟ್ ಈಗಾಗಲೇ ಸಮಯಕ್ಕೆ ತಕ್ಕಂತೆ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚಿಸಿದೆ. ಕೋರ್ಟ್ ಆದೇಶದ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
-ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ
Advertisement