ಗೆದ್ದಿತು ಸರ್ಕಾರದ ಹಠ

ರಾಜ್ಯ ಸರ್ಕಾರ ಬಿಬಿಎಂಪಿ ವಿಸರ್ಜನೆಗೆ ಶನಿವಾರ ಆದೇಶ ಹೊರಡಿಸಿದ್ದು, ಆಡಳಿತಾಧಿಕಾರಿಯಾಗಿ ಟಿ.ಎಂ.ವಿಜಯ ಭಾಸ್ಕರ್ ಅ„ಕಾರ ಸ್ವೀಕರಿಸಿದ್ದಾರೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ವಿಸರ್ಜನೆಗೆ ಶನಿವಾರ ಆದೇಶ ಹೊರಡಿಸಿದ್ದು, ಆಡಳಿತಾಧಿಕಾರಿಯಾಗಿ ಟಿ.ಎಂ.ವಿಜಯ ಭಾಸ್ಕರ್ ಅ„ಕಾರ ಸ್ವೀಕರಿಸಿದ್ದಾರೆ.

ರಾಜೇಂದ್ರಕುಮಾರ್ ಕಟಾರಿಯಾ ವರದಿಯಲ್ಲಿ ಬಿಬಿಎಂಪಿಯ ತ್ಯಾಜ್ಯ ನಿರ್ವಹಣೆ, ಜಾಹೀರಾತು ವಿಭಾಗ, ಒಎಫ್ ಸಿಯಲ್ಲಿನ ಅಕ್ರಮ ಸೇರಿದಂತೆ ಹಲವು ಅವ್ಯವಹಾರಗಳನ್ನು ತಿಳಿಸಲಾಗಿತ್ತು. ಇದನ್ನೇ ಆಧರಿಸಿ ಸರ್ಕಾರ ಬಿಬಿಎಂಪಿ ವಿಸರ್ಜನೆಗೆ ಆದೇಶ ಹೊರಡಿಸಿದೆ. ಬಿಬಿಎಂಪಿಯ ಕೌನ್ಸಿಲ್ ಕೆಎಂಸಿ ಕಾಯ್ದೆ-1976ರ ಪ್ರಕಾರ ಅಧಿಕಾರ ಚಲಾಯಿಸುವುದು ಹಾಗೂ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಕಂಡು ಬಂದಿಲ್ಲ.

ಆರ್ಥಿಕ ನಿರ್ವಹಣೆಯಲ್ಲಿ ಅಶಿಸ್ತಿನ ನಡವಳಿಕೆ ತೋರಿ ಆರ್ಥಿಕ ನಷ್ಟ ಉಂಟುಮಾಡಿರುವುದು ಹಾಗೂ ಪಾಲಿಕೆ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಕೆಲಸ ಮಾಡಿರುವುದರಿಂದ ಕೌನ್ಸಿಲ್ 
ವಿಸರ್ಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ಹೊರಬಿದ್ದ ನಂತರವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ  ಕಾರ್ಯದರ್ಶಿಯಾಗಿದ್ದ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತು. ಅವರು ಶನಿವಾರ ಸಂಜೆಯೇ ಬಿಬಿಎಂಪಿಗೆ ಭೇಟಿ ನೀಡಿ ಅಧಿಕಾರ ಸ್ವೀಕರಿಸಿದರು. ಇಂಧನ  ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯಕ್ ಅವರನ್ನು ಆಯ್ತುಕರಾಗಿ ನೇಮಿಸಿದ್ದು, ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಿರುವ ಆಯುಕ್ತ ಲಕ್ಷ್ಮಿನಾರಾಯಣ ಅವರು ವರ್ಗವಾಗಿದ್ದು, ಅವರಿಗಿನ್ನು ಹುದ್ದೆ ತೋರಿಸಿಲ್ಲ.

ಓದಲು ನೀಡಿಲ್ಲ

ವಿಸರ್ಜನೆಗೆ ಶೋಕಾಸ್ ನೋಟಿಸ್ ಬಗ್ಗೆ ಚರ್ಚಿಸಲು ಕೌನ್ಸಿಲ್ ಸಭೆ ಕರೆದಾಗ ಸದಸ್ಯರಿಗೆ ಕಟಾರಿಯಾ ವರದಿಯ ಪ್ರತಿ ನೀಡಬೇಕೆಂದು ಸದಸ್ಯರು ಮನವಿ ಮಾಡಿದ್ದರು. ಇದರಂತೆ ಸಭೆಯ ನಂತರ ಸರ್ಕಾರಕ್ಕೆ ನೀಡಿದ್ದ ಉತ್ತರದಲ್ಲಿ ವರದಿಯ ಪ್ರತಿಯನ್ನು ನೀಡಿ ನಂತರ ಮತ್ತೊಮ್ಮೆ ಚರ್ಚಿಸಲು ಅವಕಾಶ ನೀಡುವಂತೆ ಕೋರಲಾಗಿತ್ತು. ಆದೇಶ ಪತ್ರದಲ್ಲಿರುವಂತೆ ಮೇಯರ್ ಶಾಂತಕುಮಾರಿ, ಆಯುಕ್ತ ಲಕ್ಷ್ಮಿನಾರಾಯಣ ಹಾಗೂ ಸದಸ್ಯ ಪದ್ಮನಾಭರೆಡ್ಡಿ ಸರ್ಕಾರಕ್ಕೆ ಉತ್ತರ ನೀಡಿದ್ದಾರೆ.

ಇದರಲ್ಲಿ ವರದಿಯ ಪ್ರತಿ ನೀಡುವಂತೆ ಪದ್ಮನಾಭರೆಡ್ಡಿ ಕೋರಿರುವುದನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಷೋಕಾಸ್ ನೋಟಿಸ್‍ನಲ್ಲಿ ಉಲ್ಲೇಖಿಸಿರುವ ಸಿಐಡಿ ವರದಿ, ನ್ಯಾಯಾಲಯದ ಆದೇಶಗಳು, ಪತ್ರಿಕಾ ವರದಿಯ ಪ್ರತಿ ಒದಗಿಸಲೂ ಕೇಳಲಾಗಿತ್ತು. ಆದರೆ ಇದಕ್ಕೂ ಆದೇಶದಲ್ಲಿ ಸ್ಪಷ್ಟನೆ ನೀಡಿರುವ ಸರ್ಕಾರ, ಇದರಲ್ಲಿ ಪರಿಗಣಿಸಬಹುದಾದ ಯಾವುದೇ ಅಂಶಗಳು ಕಾಣುತ್ತಿಲ್ಲ ಎಂದು ಹೇಳಿದೆ.

ಆದೇಶದಲ್ಲಿ ಇರುವ ಅಂಶಗಳೇನು?
ಬಿಬಿಎಂಪಿ ವಿಸರ್ಜನೆಗೆ ಆದೇಶ ಮಾಡಿರುವ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯ ತಂಡದ ವರದಿಯನ್ನೇ ಆಧಾರವಾಗಿರಿಸಿರುವ ಬಗ್ಗೆ ಆದೇಶ ಪತ್ರದಲ್ಲಿ
ಉಲ್ಲೇಖಿಸಿದೆ. ಏ.18 ರಂದು ಬಿಬಿಎಂಪಿ ಬಿಬಿಎಂಪಿ ಸದಸ್ಯರಿಗೆ ಷೋಕಾಸ್ ನೋಟಿಸ ನೀಡಿದ್ದ ಸರ್ಕಾರ, ಮಹಾಲೇಖಪಾಲರ ವರದಿ, ಉಪಲೋಕಾಯುಕ್ತರ ಪ್ರಾಥಮಿಕ ವಿಚಾರಣಾ ವರದಿ, ರಿಟ್ ಅರ್ಜಿಗಳಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶ, ಅಕ್ರಮಕ್ಕೆ ಸಂಬಂಧಿಸಿದ ಪತ್ರಿಕಾ ವರದಿ ಸೇರಿದಂತೆ ಹಲವು ತನಿಖಾ ವರದಿಗಳನ್ನು ಆಧಾರವಾಗಿರಿಸಿತ್ತು.

ಆದರೆ ವಿಸರ್ಜನೆಗೆ ಆದೇಶ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ ಕಟಾರಿಯಾ ವರದಿಯನ್ನು ಮಾತ್ರ ಉಲ್ಲೇಖಿಸಿದೆ. ಕಟಾರಿಯಾ ತಂಡ 2015ರ ಮಾ.5 ರಂದು ಪತ್ರದಲ್ಲಿ ಸರ್ಕಾರಕ್ಕೆ ತಿಳಿಸಿರುವ ಪ್ರಕಾರ, ಪಾಲಿಕೆಯಲ್ಲಿ ಕಾಮಗಾರಿಗಳಿಗೆ ಸಂಕೇತ ನೀಡುವ ಸಂದರ್ಭ ಕಾಮಗಾರಿಗಳ ಸಂಖ್ಯೆ ಹಾಗೂ ಮೊತ್ತದಲ್ಲಿನ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಮರುಹೊಂದಾಣಿಕೆ ಇಲ್ಲದೆ ಹೆಚ್ಚುವರಿ ಕಾಮಗಾರಿ ಸಂಕೇತ ನೀಡಿರುವುದು, ಕಾಮಗಾರಿ ಹೆಸರು ಬದಲಾವಣೆ, ಒಂದೇ ಕಾಮಗಾರಿಗೆ ಎರಡು ಸಂಕೇತ ನೀಡಿರುವುದು ಸೇರಿದಂತೆ  

ಲೆಕ್ಕಪರಿಶೋಧಕರು ಹಲವು ಲೋಪಗಳನ್ನು ಅವಲೋಕಿಸಿದ್ದಾರೆ.
ತ್ಯಾಜ್ಯ ವಿಲೇವಾರಿಯನ್ನು ಅಸಮರ್ಪಕವಾಗಿನಿರ್ವಹಿಸಿರುವುದು.
ಜಾಹೀರಾತು ವಿಭಾಗದಲ್ಲಿ ಸಾವಿರಾರು ಕೋಟಿಗಳ ಶುಲ್ಕ ವಸೂಲಿ ಮಾಡದೆ ಆರ್ಥಿಕ ನಷ್ಟವಾಗಿರುವುದು.
ಸುಮಾರು 20ಸಾವಿರ ಜಾಹೀರಾತು ಫಲಕಗಳನ್ನು ಅನಧಿಕೃತವಾಗಿ ಅಳವಡಿಸಿದ ಬಗ್ಗೆ ಉಪಲೋಕಾಯುಕ್ತರಿಂದ ಅಸಮಾಧಾನ
ಒಎಫ್ ಸಿ ಕೇಬಲ್ ಅಳವಡಿಕೆಯಲ್ಲಿ ಸಾವಿರಾರು ಕೋಟಿ ನಷ್ಟ.
ಸಾವಿರಾರು ಕೋಟಿ ಬಿಲ್ ಪಾವತಿಸದೆ ಉಳಿಸಿಕೊಂಡಿರುವುದು.
ಪಾಲಿಕೆಯ ಆಸ್ತಿಗಳನ್ನು ಅಡಮಾನವಿಟ್ಟು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು.
ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ; ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿ ಸರ್ಕಾರಕ್ಕೆ ಬಿಬಿಎಂಪಿಯಿಂದ ಮುಜುಗರ.
ಕಸವಿಲೇವಾರಿಗೆ ಸಂಬಂಧಿಸಿದ ಪಿಐಎಲ್ ರಿಟ್ ಅರ್ಜಿಗಳು ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲೇ ಇವೆ.
2015ರ ಫೆ.2ರಂದು ಕಸ ವಿಲೇವಾರಿ ವಿವಾದ ವಿಚಾರಣೆ ವೇಳೆ ನ್ಯಾಯಾಲಯ, 5 ತಿಂಗಳಿಂದ ಪೌರಕಾರ್ಮಿಕರಿಗೆ ಬಾಕಿ ಪಾವತಿ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.
ಕೆಎಂಸಿ ಕಾಯ್ದೆ-1976 ರ ಪ್ರಕಾರ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com