

ಬೆಂಗಳೂರು: ತಪ್ಪು ಮಾಡದಿದ್ದರೂ ಅನಗತ್ಯವಾಗಿ ಠಾಣೆಯಲ್ಲಿ ಕೂರಿಸಿಕೊಂಡು ಪೊಲೀಸರು ಲಂಚಕ್ಕೆ ಒತ್ತಾಯಿಸಿ, ಅವಮಾನ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ಮೂಲದ ದೀಪು(25)ಎನ್.ಕೆ ಎಂಬ ಯುವಕ ಮರಣ ಪತ್ರ ಬರೆದಿಟ್ಟು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಗೋಡೆಯಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ 3 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಸಾವಿಗೆ ಕಾರಣರಾದ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾನೆ.
ಆಗಿದ್ದೇನು?: ದೀಪು ಹಾಗೂ ಮಂಗಳೂರು ಮೂಲದ ಅಕ್ಷತಾ ಒಂದೇ ಕಡೆ ಕೆಲಸ ಮಾಡುತ್ತಿದ್ದರು ಮತ್ತು ಒಂದೇ ಪ್ರದೇಶದಲ್ಲಿ ವಾಸವಿದ್ದರು. ಹೀಗಾಗಿ ಇಬ್ಬರ ನಡುವೆ ಸ್ನೇಹವಿತ್ತು. ಅಕ್ಷತಾಳ ಕೋರಿಕೆ ಮೇರೆಗೆ ದೀಪು ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಖರೀದಿಸಿ ಆಕೆಗೆ ನೀಡಿದ್ದ. ಆದರೆ, ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂಗ ಕೆಲಸ ತೊರೆದ ಅಕ್ಷತಾ, ಊರಿಗೆ ವಾಪಸ್ ಹೋಗಿದ್ದಳು. ಆದರೆ, ಮಾರ್ಚ್ 16ರಂದು ಏಕಾಏಕಿ ನಗರಕ್ಕೆ ಬಂದು ದೀಪು ಹೆಸರಿನಲ್ಲಿ ತೆಗೆದುಕೊಂಡಿದ್ದ ಸಿಮ್ ಕಾರ್ಡ್ ಜತೆಗೆ ಮೊಬೈಲ್ ಫೋನ್ ಅನ್ನು ಕೊಟ್ಟು ತಾನು ಮುಂಬೈಗೆ ಹೋಗುತ್ತಿರುವುದಾಗಿ ಹೇಳಿದ್ದಳು. ಇದರಿಂದ ಗಾಬರಿಗೊಂಡ ಸಹೋದರಿ ಆಶಾ ಹಾಗೂ ಸಂಬಂಧಿ ಕುಮಾರ್ ಎಂಬುವರು ಬೆಂಗಳೂರಿಗೆ ಬಂದು ದೀಪು ಭೇಟಿ ಮಾಡಿ ಅಕ್ಷತಾ ಬಗ್ಗೆ ಕೇಳಿದ್ದಾರೆ. ಮಾರ್ಚ್16ರಂದು ಅಕ್ಷತಾ ತನ್ನನ್ನು ಭೇಟಿ ಮಾಡಿ ಮುಂಬೈಗೆ ಹೋಗುತ್ತಿರುವುದಾಗಿ ಹೇಳಿ ಹೋಗಿದ್ದಾಳೆ. ಅದಾದ ಬಳಿಕ ಸಂಪರ್ಕದಲ್ಲಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾನೆ. ಹೀಗಾಗಿ, ಮೂವರು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು.
ನಂತರ ನಡೆದ ಎಲ್ಲಾ ವಿಚಾರವನ್ನು ದೀಪು ತನ್ನ ಡೆತ್ ನೋಟ್‍ನಲ್ಲಿ ಬರೆದಿಟ್ಟಿದ್ದಾನೆಂದು ಸಹೋದರ ಹೇಮಂತ್ ತಿಳಿಸಿದ್ದಾರೆ. ಹೆಬ್ಬಗೋಡಿ ಠಾಣೆ ಎಸ್ಸೈ ಹನುಮಂತರಾಜು, ಎಎಸ್ಸೈ ಸಿದ್ದರಾಜು, ಡಾ.ಕುಮಾರ್ ಹಾಗೂ ಆಸಾ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಸಂಬಂಧ ಐಪಿಸಿ ಕಲಂ 306 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗ್ರಾಮಾಂತರ ಎಸ್ಪಿ ರಮೇಶ್ ಬಾನೂತ್ ತಿಳಿಸಿದ್ದಾರೆ.