ಬೆಂಗಳೂರು: ವಿಕೆಂಡ್ ಸಂಭ್ರಮದಲ್ಲಿ ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಹೊರಟ್ಟಿದ್ದ ವಿದ್ಯಾರ್ಥಿಗಳ ಕಾರು ದೇವಹನಹಳ್ಳಿಯ ಬೂದಿಗೆರೆ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ಮಹದೇವಪುರದ ನಿವಾಸಿ, ಸಿಲಿಕಾನ್ ಸಿಟಿ ಕಾಲೇಜಿನ ವಿದ್ಯಾರ್ಥಿ ಕಿರಣ್ ಕುಮಾರ್ ಹಾಗೂ ಕೆ.ಆರ್.ಪುರಂನ ಚೈತನ್ಯ ಕಾಲೇಜು ವಿದ್ಯಾರ್ಥಿ ಚಾರ್ಲ್ಸ್ ಮೃತ ವಿದ್ಯಾರ್ಥಿಗಳು. ಶೇಷಾದ್ರಿ, ಮಣಿಕುಮಾರ್, ಶ್ರೀನಿವಾಸ್ ಭಟ್, ಕಿರಣ್ ಕುಮಾರ್ ಎಂಬ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನೆಲ್ಲ ಭಟ್ರಹಳ್ಳಿ ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೇ ಕಾರಿನಲ್ಲಿದ್ದ ಜಯಕುಮಾರ್, ಅವಿನಾಶ್ ಎಂಬುವವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ವಾರಾಂತ್ಯದ ಸಂಭ್ರಮಕ್ಕಾಗಿ ನಂದಿಬೆಟ್ಟಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಕಾರನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆಯೊಂದಿಗೆ ಜಗಳವಾಡಿ ಕಾರು ಕೊಂಡಿದ್ದ ಕಿರಣ್ : ಮೃತ ಕಿರಣ್ 15 ದಿನಗಳ ಹಿಂದಷ್ಟೇ ತಂದೆಯೊಂದಿಗೆ ಜಗಳವಾಡಿ ಹೊಸ ಕಾರು ತೆಗೆಸಿಕೊಂಡಿದ್ದರು. ಭಾನುವಾರ ಗೆಳೆಯರೊಂದಿಗೆ ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಹೊರಡುವ ಯೋಜನೆ ಹಾಕಿಕೊಂಡಿದ್ದರು. 5 ಜನ ಪ್ರಯಾಣ ಮಾಡುವ ಕಾರಿನಲ್ಲಿ 8 ಜನ ಪ್ರಯಾಣ ಮಾಡಿದ್ದಲ್ಲದೇ ಅತೀ ವೇಗವಾಗದಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Advertisement