ಕಸ ಮುಕ್ತಕ್ಕಾಗಿ ಕೈ ಜೋಡಿಸಿದ ಜನ

ಸಮಸ್ಯೆಗಳ ಬಗ್ಗೆ ನಾಗರಿಕರು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು...
ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಮಂಗಳವಾರ ಜಾಗೃತ ನಾಗರಿಕರ ವೇದಿಕೆ ಏರ್ಪಡಿಸಿದ್ದ `ಕಸ ಮುಕ್ತನಗರ'ಕ್ಕಾಗಿ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆ
ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಮಂಗಳವಾರ ಜಾಗೃತ ನಾಗರಿಕರ ವೇದಿಕೆ ಏರ್ಪಡಿಸಿದ್ದ `ಕಸ ಮುಕ್ತನಗರ'ಕ್ಕಾಗಿ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆ
Updated on

ಬೆಂಗಳೂರು: ಸಮಸ್ಯೆಗಳ ಬಗ್ಗೆ ನಾಗರಿಕರು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

ನಗರದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಮಂಗಳವಾರ ಜಾಗೃತ ನಾಗರಿಕರ ವೇದಿಕೆ ಏರ್ಪಡಿಸಿದ್ದ `ಕಸ ಮುಕ್ತ ನಗರ'ಕ್ಕಾಗಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಬೆಂಗಳೂರಿಗಾಗಿ ಏನೇನೂ ಮಾಡುತ್ತಿಲ್ಲ. ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.

ಕಸದಿಂದ ವಿಷದ ವಾತಾವರಣ ಸೃಷ್ಟಿಯಾಗುತ್ತಿರುವ ಪರಿಣಾಮ ಯಾವುದೇ ಗ್ರಾಮಗಳು ಬೆಂಗಳೂರು ಕಸವನ್ನು ಹಾಕಲು ಬಿಡುತ್ತಿಲ್ಲ. ಮಂಡೂರಿನಲ್ಲಿ ಕಸದ ಗುಡ್ಡೆ ನಿರ್ಮಾಣವಾದ ನಂತರ ಹೊರವಲಯದ ಎಲ್ಲ ಗ್ರಾಮಗಳು ವಿರೋಧ ವ್ಯಕ್ತಪಡಿಸುತ್ತಿವೆ. ತಂತ್ರಜ್ಞಾನ ಮುಂದುವರಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಹೇಳಿದರು.

ಸಚಿವರ ಸಂಬಂಧಿಗಳೇ?: ಬಿಬಿಎಂಪಿ ಸದಸ್ಯರ ಸಂಬಂಧಿಗಳಿಗೇ ಗುತ್ತಿಗೆಗಳನ್ನು ನೀಡುವ ಪರಿಪಾಠ ಬೆಳೆಯುತ್ತಿದೆ. ರಸ್ತೆಯಲ್ಲಿ ಕಸ ಹಾಕಿದ ಕೂಡಲೇ ಸ್ಥಳೀಯರು ಜಾಗೃತರಾಗಿ ಮಹಾನಗರ ಪಾಲಿಕೆಗೆ ಕರೆ ಮಾಡಬೇಕು. ಕಸ ವಿಲೇವಾರಿ ಮಾಡುವವರೆಗೂ ಬಿಡದೆ ಪಟ್ಟು ಹಿಡಿದಾಗ, ಪ್ರತಿಭಟನೆ ಕೈಗೊಂಡಾಗ ಮಾತ್ರ ಜನಪ್ರತಿನಿಧಿಗಳು, ಸರ್ಕಾರಗಳು ಸಮಸ್ಯೆಗಳಿಗೆ ಸ್ಪಂದಿಸುತ್ತವೆ ಎಂದು ಹೇಳಿದರು. ಗುತ್ತಿಗೆದಾರರು ಮತ್ತು ಪೌರ ಕಾರ್ಮಿಕರ ನಡುವಿನ ಒಡನಾಟ ಹೊಂದಾಣಿಕೆ ಇಲ್ಲ. ಮಹಾನಗರ ಪಾಲಿಕೆ ಮೂಲಕವೇ ಪೌರ ಕಾರ್ಮಿಕರಿಗೆ ನೇರವಾಗಿ ಸಂಪರ್ಕವಿದ್ದರೆ ಸಮಸ್ಯೆ ಅರ್ಧ ಇತ್ಯರ್ಥವಾಗುತ್ತದೆ ಎಂದು ಸಲಹೆ ನೀಡಿದರು.

ಚುರುಕು ಮುಟ್ಟಿಸಿ: ರಂಗಕರ್ಮಿ ಎಚ್.ಬಿ. ಸೋಮಶೇಖರ್ ರಾವ್ ಮಾತನಾಡಿ, ಸರ್ಕಾರ ನಿಷ್ಕ್ರಿಯವಾಗಿದ್ದು, ಯಾವುದೇ ಕೆಲಸಗಳು ನಡೆಯುತ್ತಿಲ್ಲ. ವಿಧಾನಸೌಧ ನಿಧಾನಸೌಧವಾಗಿದೆ. ಪ್ರತಿಭಟನೆಗಳ ಮೂಲಕ ಚುರುಕು ಮುಟ್ಟಿಸಿದಾಗ ಮಾತ್ರ ಸರ್ಕಾರಗಳು ಕಣ್ತೆರೆಯುತ್ತವೆ ಎಂದು ಹೇಳಿದರು. ನಗರದ ಜನತೆಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಕಸವೂ ಒಂದು. ಕಳೆದ ಒಂದು ತಿಂಗಳಿನಿಂದ ವಿಲೇವಾರಿಯಾಗದ ಕಸ ಗಬ್ಬು ನಾರುತ್ತಿದ್ದು, ಇದರಿಂದ ಬೇಸತ್ತಿರುವ ಜನತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶ್ರೀನಿವಾಸನಗರ, ಕತ್ರಿಗುಪ್ಪೆ, ವಿವೇಕಾನಂದ ನಗರ ಸೇರಿದಂತೆ ಎಲ್ಲೆಡೆ ಕಸದ ರಾಶಿಯಾಗುತ್ತಿದೆ ಎಂದರು.

ಪರಿಸರವಾದಿ ನಾಗೇಶ ಹೆಗಡೆ ಮಾತನಾಡಿ, ಸಿಂಗಾಪುರ, ಟೋಕಿಯೋ, ಕೆನಡಾದಲ್ಲಿ ನಮಗಿಂತ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದರೂ ಸೂಕ್ತ ನಿರ್ವಹಣೆಯಿಂದ ಸಮಸ್ಯೆ ಉಂಟಾಗಿಲ್ಲ. ಆದರೆ ನಮ್ಮಲ್ಲಿ ವಿಲೇವಾರಿಗೆ ನಿರ್ಲಕ್ಷ್ಯದಿಂದ ಸಮಸ್ಯೆ ದೊಡ್ಡದಾಗಿದೆ ಎಂದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಎನ್ .ಟಿ.ಮಾಧವರಾವ್, ಕಾರ್ಯದರ್ಶಿ ರವಿ ಸೇರಿದಂತೆ ಬೆಂಗಳೂರು ಉಳಿಸಿ ಸಂಘಟನೆಯ ಅನೇಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com