ಜನವರಿಯಲ್ಲಿ ರು.1500 ಕೋಟಿ ಕಾಮಗಾರಿ

ಬಿಬಿಎಂಪಿಯಲ್ಲಿ ಮೈತ್ರಿಕೂಟ ಆಡಳಿತಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಶೂನ್ಯ ಸಾಧನೆ ಮಾಡಿದೆ ಎಂಬ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಕ್ಕೆ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ತಿರುಗೇಟು ನೀಡಿದ್ದಾರೆ. ಜತೆಗೆ ನಗರದ ರಸ್ತೆ ಹಾಳಾಗಲು ಬಿಜೆಪಿ ಅವಧಿಯಲ್ಲಿನ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಿಬಿಎಂಪಿಯಲ್ಲಿ ಮೈತ್ರಿಕೂಟ ಆಡಳಿತಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಶೂನ್ಯ ಸಾಧನೆ ಮಾಡಿದೆ ಎಂಬ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಕ್ಕೆ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ತಿರುಗೇಟು ನೀಡಿದ್ದಾರೆ. ಜತೆಗೆ ನಗರದ ರಸ್ತೆ ಹಾಳಾಗಲು ಬಿಜೆಪಿ ಅವಧಿಯಲ್ಲಿನ ಕಳಪೆ ಕಾಮಗಾರಿಗಳೇ ಕಾರಣ ಎಂದು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು1,500 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಅಲ್ಲಿಯವರೆಗೆ ಬಿಜೆಪಿ ನಾಯಕರು ತಾಳ್ಮೆಯಿಂದಿರಬೇಕು, ಕಡಿಮೆ ಅವಧಿಯಲ್ಲಿ ಜಾದೂ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಏಪ್ರಿಲ್‍ನಿಂದ ಈವರೆಗೆ ಪಾಲಿಕೆ ಮೇಲಿದ್ದ 400 ಕೋಟಿ ಸಾಲ ತೀರಿಸಲಾಗಿದೆ. ಬಿಜೆಪಿ ಕಳೆದ 5 ವರ್ಷಗಳ ಅವಧಿಯಲ್ಲಿ ಒಂದೂ ಶಾಶ್ವತ ಕಾಮಗಾರಿ ಹಮ್ಮಿಕೊಂಡಿಲ್ಲ.

ಅವೈಜ್ಞಾನಿಕ ಬಜೆಟ್, ಕಳಪೆ ನಿರ್ವಹಣೆ ಮಾಡಿದ್ದನ್ನೇ ಸಾಧನೆ ಎಂಬಂತೆ ಬೀಗುತ್ತಿದೆ ಎಂದು ಟೀಕಿಸಿದ ಅವರು ಚುನಾವಣೆ ನೀತಿ ಸಂಹಿತೆ ಮುಗಿದ ಮೇಲೆ ಜನವರಿಯಲ್ಲಿ ರು.1,500 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ. ಅಲ್ಲಿಯವರಿಗೆ ಬಿಜೆಪಿಯುವರು ತಾಳ್ಮೆಯಿಂದಿರಬೇಕು ಎಂದು ಹೇಳಿದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಅಡಮಾನ ಇಟ್ಟಿರುವ ಪಾರಂಪರಿಕ ಕಟ್ಟಡಗಳನ್ನು ವಾಪಸ್ ಪಡೆಯಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಂಪೇಗೌಡ ವಸ್ತು ಸಂಗ್ರಹಾಲಯ ಕಟ್ಟಡ ಹಾಗೂ ಕೆ.ಆರ್.ಮಾರುಕಟ್ಟೆ ಕಟ್ಟಡಗಳನ್ನು ಬಿಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ರಸ್ತೆ ಗುಂಡಿಗೆ ರು.20 ಕೋಟಿ: ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ರು.600 ಕೋಟಿ ಖರ್ಚು ಮಾಡಲಾಗಿದೆ ಎಂಬ ಸುಳ್ಳು ಆರೋಪ ಮಾಡಲಾಗುತ್ತಿದೆ. ವಾಸ್ತವವಾಗಿ ರು.20 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಕಳೆದ ಏಪ್ರಿಲ್ ನಿಂದ ಕೇವಲ ರು.10 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಕೊಂಡಯ್ಯ ತಪ್ಪುಮಾಡಿಲ್ಲ: ಕೆಂಪೇಗೌಡ ರಸ್ತೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್ ಹಗರಣದ ಆರೋಪದಲ್ಲಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರ ಪಾತ್ರವಿಲ್ಲ. ಈ ಕಟ್ಟಡವನ್ನು ಯಾರಿಗೂ ಪರಭಾರೆ ಮಾಡಿಲ್ಲ. ಈ ಕಟ್ಟಡದಿಂದ ಪಾಲಿಕೆಗೆ 3 ತಿಂಗಳಿಗೊಮ್ಮೆ ರು.23 ಲಕ್ಷ ಆದಾಯ ಬರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಸ್ಥಾನದ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಅವರ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com