
ಬೆಂಗಳೂರು: ಮನುಷ್ಯರ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಸಹಕಾರಿಯಾಗುವ ಯೋಗವನ್ನು ವಿಶ್ವಕ್ಕೆ ನೀಡಿದ ಕೊಡುಗೆ ಭಾರತಕ್ಕಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಬಿಬಿಎಂಪಿ ಬುಧವಾರ ಏರ್ಪಡಿಸಿದ್ದ ಇಂದಿರಾನಗರ ಜೋಡಿ ರಸ್ತೆಗೆ `ಪರಮ ಹಂಸ ಯೋಗಾನಂದ ರಸ್ತೆ' ಎಂದು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ವಿಶ್ವದ ಇತರೆ ದೇಶಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ಅದರಲ್ಲಿ ಪ್ರಮುಖವಾಗಿ ಯೋಗ ಒಂದು ಮಹತ್ವದ ಕೊಡುಗೆಯಾಗಿದೆ ಎಂದರು.
ಕುವೆಂಪು, ಬಸವಣ್ಣ, ದೇವರಾಜ ಅರಸು ಅವರಂತಹ ಮಹಾನ್ ನಾಯಕರು ಸಾರಿರುವ ಸಂದೇಶಗಳು ನಮಗೆಲ್ಲಾ ಮಾದರಿ. ಅವರ ಒಳ್ಳೆಯ ಕೆಲಸಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ತಿಳಿಸುವ ಕಾರ್ಯಗಳಾಗಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಜನರ ಸಹಕಾರ ಅತ್ಯಗತ್ಯ. ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ತ್ಯಾಜ್ಯ ವಿಂಗಡಣೆಗೆ ಒತ್ತು ನೀಡಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಇದೇ ವೇಳೆ ತಿಳಿಸಿದರು.
ಮೇಯರ್ ಬಿ.ಎನ್.ಮಂಜುನಾಥರೆಡ್ಡಿ, ಬೆಂಗಳೂರಿನ ನಾಗರಿಕರು ಕಸ ವಿಂಗಡಿಸಿ ವಿತರಣೆ ಮಾಡಬೇಕು. ಬೆಂಗಳೂರನ್ನು ಸ್ವಚ್ಛವಾಗಿಡಲು ಮತ್ತು ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕಸ ವಿಂಗಡಣೆ ಮಾಡುವುದು ಅತ್ಯಗತ್ಯ. ಹೀಗಾಗಿ ಪ್ರತಿಯೊಬ್ಬರೂ ತ್ಯಾಜ್ಯ ವಿಂಗಡಣೆ ಮಾಡುವತ್ತ ಗಮನ ಹರಿಸಬೇಕು ಹಾಗೂ ಬಿಬಿಎಂಪಿ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
Advertisement