ಪೌರ ಕಾರ್ಮಿಕರ ವೇತನಕ್ಕೂ ಹಣಕಾಸಿನ ಕೊರತೆ

ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ
ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ
Updated on

ಬೆಂಗಳೂರು: ತ್ಯಾಜ್ಯ ವಿಲೇವಾರಿ ಮಾಡುವ ಗುತ್ತಿಗೆದಾರರಿಗೆ ಹಾಗೂ ಪೌರ ಕಾರ್ಮಿಕರಿಗೆ ವೇತನ ನೀಡಲು ಬಿಬಿಎಂಪಿ ಬಳಿ ಹಣಕಾಸಿನ ಕೊರತೆ ಇರುವುದಾಗಿ ಪಾಲಿಕೆ ಆಯುಕ್ತರು ಹೈಕೋರ್ಟ್‍ನಲ್ಲಿ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಪಾಲಿಕೆ ಬಳಿ ಹಣದ ಕೊರತೆ ಇದ್ದು, ಕಳೆದ 5 ತಿಂಗಳಿನಿಂದ ಗುತ್ತಿಗೆದಾರರಿಗೆ ಹಾಗೂ ಪೌರಕಾರ್ಮಿಕರಿಗೆ ಹಣ ಪಾವತಿಸಿಲ್ಲ. ಇದರ ಮೊತ್ತ ಸದ್ಯ ರು.150 ಕೋಟಿಗೆ ತಲುಪಿದ್ದು, ಒಂದೆರಡು ತಿಂಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಿದ ನಂತರ ನೀಡುವುದಾಗಿ ಆಯುಕ್ತರು ಪೀಠದ ಗಮನಕ್ಕೆ ತಂದರು.

ಇದಕ್ಕೊಪ್ಪದ ನ್ಯಾ.ಎನ್. ಕುಮಾರ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಪೌರಕಾರ್ಮಿಕರು ಸಮಾಜದ ಕೆಳ ವರ್ಗದವರಾಗಿದ್ದು ಅವರಿಗೆ ವೇತನ ತಡೆ ಹಿಡಿದರೆ ಅವರು ಜೀವನ ಸಾಗಿಸುವುದಾದರು ಹೇಗೆ? ಪೌರಕಾರ್ಮಿಕರಿಗೆ ವೇತನ ನೀಡದೇ ಅವರಿಂದ ಕೆಲಸವನ್ನೇಕೆ ನಿರೀಕ್ಷಿಸುತ್ತೀರಿ? ಒಂದೊಮ್ಮೆ ಪೌರಕಾರ್ಮಿಕರಿಗೆ ಹಣ ಪಾವತಿಸಲು ಆಗದಿದ್ದಲ್ಲಿ ಅಧಿಕಾರಿಗಳ ಜೇಬಿನಿಂದ ಅವರಿಗೆ ಸಂಬಳ ನೀಡಿ, ಇಲ್ಲವಾದಲ್ಲಿ ಪೌರಕಾರ್ಮಿಕರಿಗೆ ಸಂಬಳ ಸಿಗದಿದ್ದರೆ ಅಧಿಕಾರಿಗಳಿಗೂ ಸಂಬಳ ಸಿಗದಂತಾಗಬೇಕು ಎಂದು ಪೀಠ ಖಾರವಾಗಿ ಪ್ರತಿಕ್ರಿಯಿಸಿದೆ. ಬಾಕಿ ವೇತನ ಪಾವತಿಸಲು ಹಣಕಾಸಿನ ನೆರವು ನೀಡುವಂತೆ ಸರ್ಕಾರದ ಮೊರೆ ಹೋಗುವಂತೆ ಪೀಠ ಸಲಹೆ ನೀಡಿ ವಿಚಾರಣೆ ಮುಂದೂಡಿತು.

ಪ್ರತ್ಯೇಕ ಬಜೆಟ್
ಕಸ ನಿರ್ವಹಣೆ ಕುರಿತ ಆರ್ಥಿಕ ಚಟುವಟಿಕೆಗಳಿಗೆಂದೇ ವಿಶೇಷ ಆಯುಕ್ತರನ್ನು ನೇಮಕ ಮಾಡಬೇಕೆಂದು ಪೀಠವು ಆದೇಶಿಸಿತು. ಕಸ ನಿರ್ವಹಣೆಗಾಗಿಯೇ ಪ್ರತ್ಯೇಕ ಬಜೆಟ್ ರೂಪಿಸುವಂತೆ ಇದೇ ವೇಳೆ ಸಲಹೆ ನೀಡಿತು. ಅಲ್ಲದೇ ಬೇಸಿಗೆ ಕಾಲ ಆರಂಭವಾಗಲಿದ್ದು ತ್ಯಾಜ್ಯದ ಸಮಸ್ಯೆಯಿಂದಾಗಿ ಹಲವಾರು ರೋಗಗಳು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಬಿಬಿಎಂಪಿ ನಿರ್ಲಕ್ಷ್ಯವಹಿಸದೆ ಈ ಸಮಸ್ಯೆ ಬಗೆಹರಿಸುವ ಕಡೆ ಕಾರ್ಯಪ್ರವೃತ್ತವಾಗಬೇಕು ಎಂದು ಪೀಠ ತಿಳಿಸಿದೆ.

ಮಾಂಸ ಮಾರಾಟಕ್ಕೆ ನಿರ್ಬಂಧ
ಯಲಹಂಕ ವಾಯುಪಡೆ ನೆಲೆಯಲ್ಲಿ ಏರ್ ಶೋ ನಡೆಯುವ ಹಿನ್ನೆಲೆಯಲ್ಲಿ ಸ್ಥಳೀಯ ಪ್ರದೇಶದಲ್ಲಿ ಮಾಂಸ ಮಾರಾಟ ಮತ್ತು ಹೋಟೆಲ್‍ಗಳಲ್ಲಿ ಮಾಂಸಾಹಾರ ಸೇವೆಯನ್ನು ಫೆ.18 ರಿಂದ 22ರವರೆಗೆ ಹೈಕೋರ್ಟ್ ನಿಷೇಧಿಸಿದೆ. ಈ ಅವಧಿಯಲ್ಲಿ ಆದೇಶ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿಭಾಗೀಯ ಪೀಠ ನಿರ್ದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com