
-ಮಂಜುನಾಥ್ ನಾಗಲೀಕರ್
ಬೆಂಗಳೂರು: ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಬಂಧನಕ್ಕೆ ತಲೆಕೆಡಿಸಿಕೊಂಡಿರುವ ನಗರ ಪೊಲೀಸರು 10 ಕೋಟಿ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಡಿ.28ರಂದು ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಸಿ ಕ್ಯಾಮೆರಾಗಳಿಂದ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ಇನ್ನು ದೇಶದ ಹಲವು ರಾಜ್ಯಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಉಗ್ರರು ಹಾಗೂ ಸ್ಫೋಟಗಳೊಂದಿಗೆ ಹೋಲಿಸಿ ಆರೋಪಿಗಳು ಯಾರಿರಬಹುದು ಎನ್ನುವುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಹಲವು ತನಿಖಾ ತಂಡಗಳು ಬೇರೆ ಬೇರೆ ರಾಜ್ಯಗಳಿಗೆ ಹೋಗಿ ನಗರಕ್ಕೆ ವಾಪಸಾಗಿದ್ದಾರೆ. ಇಷ್ಟಾದರೂ ತನಿಖೆಯಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಂಡು ಬಂದಿಲ್ಲ. ಹೀಗಾಗಿ ಾರೋಪಿಗಳ ಸುಳಿವಿಗಾಗಿ ರಾಜ್ಯದ ಸರಿ ಸುಮಾರು 10 ಕೋಟಿ ಫೋನ್ ಕರೆಗಳನ್ನು ಪರಿಶೀಲಿಸುವ ಬೃಹತ್ ಕಾರ್ಯಾಚರಣೆ ಆರಂಭಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಿರ್ದಿಷ್ಟ ಮೊಬೈಲ್ ಫೋನ್ ಟವರ್, ಪ್ರದೇಶ, ವ್ಯಾಪ್ತಿಯನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸುತ್ತಿಲ್ಲ. ಬದಲಿಗೆ, ಸುಳಿವು ಸಿಗಬಹುದಾದ ಪ್ರದೇಶಗಳಿಂದ ಹೊರ ಹೋಗಿರುವ ಹಾಗೂ ಒಳಬಂದಿರುವ ಕರೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ತನಿಖೆ ಎಲ್ಲ ಮೊಬೈಲ್ ಫೋನ್ ಕಂಪನಿಗಳಿಂದಲೂ ಹೆಚ್ಚಿನ ಸಹಕಾರವನ್ನು ಅಧಿಕಾರಿಗಳು ಕೋರಿದ್ದಾರೆ. ಈ ಪ್ರಕ್ರಿಯೆ ಮುಗಿಯಲು ತಿಂಗಳುಗಳೇ ಬೇಕು. ಈ ಕಾರ್ಯಾಚರಣೆಗೆಂದು ವಿಶೇಷ ತಂಡ ರಚಿಸಲಾಗಿದೆ.
ಉಳಿದಂತೆ ಬೇರೆ ಬೇರೆ ಕೋನಗಳಲ್ಲಿ ಸ್ಫೋಟ ಪ್ರಕರಣದ ತನಿಖೆಯನ್ನು ಇಡೀ ಸಿಸಿಬಿ ಘಟಕ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಫೋಟಕ ಸುತ್ತಿಡಲಾಗಿದ್ದ ತೆಲುಗು ದಿನ ಪತ್ರಿಕೆಯ ಆಧಾರದ ಮೇಲೆ ಆಂಧ್ರಪ್ರದೇಶಕ್ಕೆ ಹೋಗಿದ್ದ ನಗರ ಪೊಲೀಸರ ತಂಡ ಬರಿಗೈಯಲ್ಲಿ ವಾಪಸಾಗಿತ್ತು.
ರೇಖಾಚಿತ್ರ ಸವಾಲು
ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಚಿತ್ರಗಳು ಸ್ಫಷ್ಟವಾಗಿಲ್ಲ. ಹೀಗಾಗಿ, ಸ್ಥಳೀಯರ ಹೇಳಿಕೆಗಳು ಹಾಗೂ ಲಭ್ಯವಿರುವ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ರೇಖಾಚಿತ್ರ ತಯಾರಿಸಿ ಅಂತಿಮಗೊಳಿಸುವುದು ಸಾಧ್ಯವಾಗುತ್ತಿಲ್ಲ. ಕ್ಯಾಮೆರಾ ಇಲ್ಲದೆಡೆ ಬಾಂಬ್ ಸ್ಫೋಟಿಸಿದೆ ಎಂದರೆ ಉಗ್ರರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನ ಅಧಿಕಾರಿಗಳದ್ದು.
ಅಲ್ಲದೇ ಸ್ಫೋಟಕ್ಕೂ ಮುನ್ನವೇ ಸ್ಥಳ ಪರಿಶೀಲಿಸಿಕೊಂಡು, ಯಾವ ಜಾಗದಲ್ಲಿ ಬಾಂಬ್ ಇಡಬೇಕು ಎನ್ನುವುದನ್ನು ತಿಳಿದುಕೊಂಡು ಹೋಗಿರುವ ಸಾಧ್ಯತೆ ಇದೆ. ಹೀಗಾಗಿ, ಈ ಕೋನದಲ್ಲಿಯೂ ತನಿಖೆ ನಡೆಯುತ್ತಿದ್ದು, ರೈಲು ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಇತರೆ ಪ್ರಮುಖ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನೇ ರಚಿಸಲಾಗಿದೆ.
Advertisement