ಲೈಂಗಿಕ ದೌರ್ಜನ್ಯ: ಗೊಂದಲದ ಹೇಳಿಕೆ ನೀಡಿದ ಬಾಲಕಿ

ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಕಾರಣಕ್ಕೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ...
ಸಹಜ ಸ್ಥಿತಿಗೆ ಮರಳಿದ ಹೊಸಗುಡ್ಡದಹಳ್ಳಿ
ಸಹಜ ಸ್ಥಿತಿಗೆ ಮರಳಿದ ಹೊಸಗುಡ್ಡದಹಳ್ಳಿ

ಬೆಂಗಳೂರು: ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಕಾರಣಕ್ಕೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದ ಮೈಸೂರು ರಸ್ತೆ ಹೊಸಗುಡ್ಡದಹಳ್ಳಿ ಗುರುವಾರ ಸಹಜ ಸ್ಥಿತಿಗೆ ಮರಳಿದೆ.

ಈ ನಡುವೆ ಶಾಲೆಯನ್ನು ಹೊಸಗುಡ್ಡದ ಹಳ್ಳಿಯಿಂದ ಎತ್ತಂಗಡಿ ನಡೆಸಲು ಸಂಚು ನಡೆದಿತ್ತು ಎನ್ನುವ ಅನುಮಾನ ದಟ್ಟವಾಗತೊಡಗಿದೆ. ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿರುವ 8 ವರ್ಷದ ಬಾಲಕಿ ಪೊಲೀಸರ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುವುರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

ವಿಚಾರಣೆ ವೇಳೆ ಬಾಲಕಿ ದೈಹಿಕ ಶಿಕ್ಷಕನ ಕೃತ್ಯದ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ. ಸಂತ್ರಸ್ತ ಬಾಲಕಿಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಲೈಂಗಿಕ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಲಾಯಿತು.

ಆರೋಪಿ ದೈಹಿಕ ಶಿಕ್ಷಕ ರಾಮಕೃಷ್ಣ ಕೆನ್ನೆಗೆ ಹೊಡೆದಿದ್ದಾಗಿ ಹೇಳುವ ಬಾಲಕಿ ಕೆಲ ಕ್ಷಣಗಳ ನಂತರ ಮೈ ಮುಟ್ಟಿ, ಬಟ್ಟೆ ತೆಗೆಯಲು ಹೇಳಿದ್ದಾನೆ ಎಂದು ಆರೋಪಿಸುತ್ತಿದ್ದಾಳೆ. ಮತ್ತೊಮ್ಮೆ ಏನೂ ಮಾಡಿಲ್ಲ ಎಂದು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾಳೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಲೈಂಗಿಕ ಕಿರುಕುಳ ನಡೆದಿರುವ ಬಗ್ಗೆ ವೈದ್ಯರು ಖಚಿತ ಮಾಹಿತಿ ನೀಡಿಲ್ಲ. ಹೀಗಾಗಿ ಮಕ್ಕಳ ತಜ್ಞರ ಸಮ್ಮುಖದಲ್ಲಿ ಬಾಲಕಿಯನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು. ವಿದ್ಯಾರ್ಥಿನಿ ನೀಡುವ ಹೇಳಿಕೆ ಆಧರಿಸಿ ಮುಂದಿನ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಹಲ್ಲೆಗೀಡಾಗಿರುವ ದೈಹಿಕ ಶಿಕ್ಷಕ ರಾಮಕೃಷ್ಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಮತ್ತಷ್ಟು ಚೇತರಿಸಿಕೊಂಡ ಬಳಿಕ ಘಟನೆ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಂದೋಬಸ್ತ್: ಮುಂಜಾಗ್ರತಾ ಕ್ರಮವಾಗಿ ಬ್ಯಾಟರಾಯನಪುರ, ಜೆ.ಜೆ ನಗರ ಮತ್ತು ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಮೂವರು ಡಿಸಿಪಿ, 5 ಎಸಿಪಿ, 10 ಇನ್ಸ್‌ಪೆಕ್ಟರ್, 25 ಎಸ್ಸೈ, 50 ಪೇದೆ ಮತ್ತು 10 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಹಿವಾಟು ಆರಂಭ: ಗಲಭೆ ಆರಂಭವಾದ ನಂತರ ಬುಧವಾರ ಬೆಳಗ್ಗೆಯಿಂದ ಹೊಸ ಗುಡ್ಡದಹಳ್ಳಿ, ನೆಹರು ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟುಗಳು ತೆರೆದವು.

ಜಾರ್ಜ್ ಭೇಟಿ
ಗಲಭೆ ವೇಳೆ ಕಲ್ಲು ತೂರಾಟದಲ್ಲಿ ಗಾಯಗೊಂಡ ರಾಜರಾಜೇಶ್ವರಿ ನಗರ ಇನ್ಸ್‌ಪೆಕ್ಟರ್ ಮಂಜುನಾಥ್, ಕಾನ್ಸ್‌ಟೇಬಲ್ ಕಟ್ಟಿಮನಿ ಹಾಗೂ ಶಾಲಾ ವಿದ್ಯಾರ್ಥಿ ಬಾಲಕ ಜಬ್ಬಾರ್ ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಕೆ.ಜೆ ಜಾರ್ಜ್ ಆರೋಗ್ಯ ವಿಚಾರಿಸಿದರು. ನಂತರ ಹಳೇ ಗುಡ್ಡದಹಳ್ಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

9 ಪ್ರಕರಣ, 25 ಮಂದಿ ವಶಕ್ಕೆ
ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ದೈಹಿಕ ಶಿಕ್ಷಕ ರಾಮಕೃಷ್ಣ ಅವರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಗಲಭೆ ಹುಟ್ಟುಹಾಕಿದ ದುಷ್ಕರ್ಮಿಗಳ ವಿರುದ್ಧ ಪ್ರತ್ಯೇಕವಾಗಿ 7 ಪ್ರಕರಣ ದಾಖಲಾಗಿವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಡಿದ, ವಾಹನಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇರೆಗೆ ಹೊಸಗುಡ್ಡದಹಳ್ಳಿ ಮತ್ತು ಜೆ.ಜೆ ನಗರದ 25 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com