ಅನಾಥ ಶವದ ಹೆಸರಿನಲ್ಲಿ ಅಂಗಾಂಗಗಳ ಕದ್ದ ಆಸ್ಪತ್ರೆ

ಅಕ್ರಮವಾಗಿ ಕಿಡ್ನಿ ಮಾರಾಟದ ಬಗ್ಗೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗುತ್ತಿರುವ ನಡುವೆಯೇ ನಗರದ ಹೆಸರಘಟ್ಟ ರಸ್ತೆ ಅದಕ್ಕಿಂತ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ರಮವಾಗಿ ಕಿಡ್ನಿ ಮಾರಾಟದ ಬಗ್ಗೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗುತ್ತಿರುವ ನಡುವೆಯೇ ನಗರದ ಹೆಸರಘಟ್ಟ ರಸ್ತೆ ಅದಕ್ಕಿಂತ ಹೀನವಾಗಿ ನಡೆದುಕೊಂಡಿದ್ದು ಬೆಳಕಿಗೆ ಬಂದಿದೆ. ಇಲ್ಲಿಯ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನ ಶವದಿಂದ ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗಳನ್ನು `ಕಳವು' ಮಾಡಿದ್ದು ಬಯಲಾಗಿದೆ. ರಾಜಗೋಪಾಲನಗರ ಯಲ್ಲಮ್ಮ ದೇವಸ್ಥಾನದ ಪಕ್ಕದಲ್ಲಿರುವ ಕಟ್ಟಡವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾರ್ಖಾನೆಂಯೊಂದರ ಉದ್ಯೋಗಿ ತುಮಕೂರು ಮೂಲದ ಗಂಗಾಧರ್ (28) ಎಂಬುವರ ಶವದಿಂದಲೇ ಅಂಗಾಂಗಗಳು ಕಳವಾಗಿವೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಸ್ಪತ್ರೆಗೆ ನೋಟಿಸ್ ನೀಡಿದ್ದೇವೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಅಂಗಾಂಗಗಳನ್ನು ಎತ್ತಿಕೊಂಡಿರುವುದು ನಿಜ. ಅವುಗಳನ್ನು ಪಾಲಕರಿಗೆ ಮರಳಿಸುತ್ತೇವೆ ಎಂದು ಹೇಳಿದ್ದಾರೆ.

ಆದರೆ, ಅನುಮತಿ ಇಲ್ಲದೇ ಶವದಿಂದ ಅಂಗಾಂಗಗಳನ್ನು ತೆಗೆದುಕೊಂಡಿರುವ ಬಗ್ಗೆ ಯಾವುದೇ ಉತ್ತರ ನೀಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಗಾಧರ ಎಂಬುವರು ಪೀಣ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಭಾಗ್ಯ ಜತೆ ರಾಜಗೋಪಾಲ ನಗರದಲ್ಲಿ ಕಳೆದ 2 ವರ್ಷಗಳಿಂದ ವಾಸವಿದ್ದರು. ಮೇ 25ರಂದು ಕೆಲಸಕ್ಕೆ ಹೋಗಿದ್ದ ಗಂಗಾಧರ ಸಂಜೆ 5.30ರ ಸುಮಾರಿಗೆ ಪತ್ನಿ ಕೆಲಸ ಮೈಡುತ್ತಿದ್ದ ಎನ್‍ಟಿಟಿಎಫ್ ಗೆ ಬಂದು ತನಗೆ ಜಾಲಹಳ್ಳಿ ಕ್ರಾಸ್‍ನಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋಗಿದ್ದರು. ಆದರೆ, ಮನೆಗೆ ವಾಪಸ್ ಬಂದಿರಲಿಲ್ಲ. ಹುಡುಕಾಟ ನಡೆಸಿದ ಕುಟುಂಬದವರು ಮೇ 28ರಂದು ಪತ್ನಿ ಭಾಗ್ಯ ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ತಾನು ಸ್ನೇಹಿತರಾದ ದಿವಾಕರ, ಗಿರೀಶ ಹಾಗೂ ರಾಜಾರಾಂ ಎಂಬುವರ ಜತೆ ಹೋಗುತ್ತಿರುವುದಾಗಿ ಅಂದು ಹೇಳಿ ಹೋಗಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರನ್ನೂ ವಿಚಾರಣೆಗೆ ಒಳಪಡಿಸಿ ಸುಮ್ಮನಾಗಿದ್ದರು.

ವಾರಸುದಾರರಿಲ್ಲದ ಶವ: ಆದರೆ, ಗಂಗಾಧರ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಸಹೋದರ ಗೋವಿಂದ, ಸೋದರ ಮಾವ ನರಸಿಂಹಯ್ಯ ಅವರಿಗೆ ಜುಲೈ 4ರಂದು ಆಕಸ್ಮಿಕವಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿರುವ ಪಟ್ಟಿಯಲ್ಲಿ ಗಂಗಾಧರ ಅವರ ಶವದ ಫೋಟೋ ಇರುವುದು ಕಾಣಿಸಿತ್ತು. ವಿಚಾರಿಸಿದಾಗ, ಅದು ಪೀಣ್ಯ ಸಂಚಾರ ಪೊಲೀಸ್ ಠಾಣೆಗೆ ಸಂಬಂಧಿಸಿದ್ದು ಎಂಬುದು ಗೊತ್ತಾಗಿ ಅಲ್ಲಿಗೆ ಹೋದಾಗ, `ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಹೂಳಲಾಗಿದೆ' ಎಂಬ ಉತ್ತರ ಸಿಕ್ಕಿತು. `ಗಂಗಾಧರ ನಾಪತ್ತೆಯಾದಾಗಿನಿಂದ ಆತನಸ್ನೇಹಿತರ ಮೇಲೆ ಅನುಮಾನವಿತ್ತು. ಹೀಗಾಗಿ, ನಾವು ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವು. ಆದರೆ, ಘಟನೆ ನಡೆದಿರುವ ಪ್ರದೇಶ ಪೀಣ್ಯ ಪೊಲೀಸ್ ಠಾಣೆಗೆ ಬರುವುದರಿಂದ ಅಲ್ಲಿಗೆ ತೆರಳಿ ಸಹೋದರ ಗಂಗಾಧರ ನಾಪತ್ತೆ ಹಿಂದೆ ಸ್ನೇಹಿತರ ಕೈವಾಡವಿದೆ ಎಂದು ದೂರು ನೀಡಿದ್ದಲ್ಲದೇ ಶವದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದೆವು. ಅದರಂತೆ ಜೂನ್ 19ರಂದು ವಿಕ್ಟೋರಿಯಾ ಆಸ್ಪತ್ರೆ ನ್ಯಾಯವಿಜ್ಞಾನ ವಿಭಾಗದ ವೈದ್ಯರ ತಂಡ, ಪೊಲೀಸರು, ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಹೂಳಲಾಗಿದ್ದ ಶವವನ್ನು ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು' ಎನ್ನುತ್ತಾರೆ ಸೋದರ ಮಾವ ನರಸಿಂಹಯ್ಯ.

 ಅಂಗಾಂಗಳೇ ನಾಪತ್ತೆ: ಮರು ಶವಪರೀಕ್ಷೆ ನಡೆಸಿದ ವಿಕ್ಟೋರಿಯಾಆಸ್ಪತ್ರೆ ನ್ಯಾಯವಿಜ್ಞಾನ ಪ್ರಯೋಗಾಲಯದ ವೈದ್ಯರಿಗೆ ಅಚ್ಚರಿಯಾಯಿತು. ಏಕೆಂದರೆ, ಗಂಗಾಧರ ಅವರ ಶವದಲ್ಲಿ ಮೂತ್ರಪಿಂಡಗಳು (ಕಿಡ್ನಿ), ತಲೆಬುರುಡೆ ಮತ್ತು ಬೆನ್ನೆಲುಬಿನ ನಾಳ ಭಾಗದ ಸರುಷ್ಟಿ ಚರ್ಮ, ಮೆದುಳು ಮತ್ತು ಮೇರು ದಂಡ (ಬ್ರೈನ್ ಆ್ಯಂಡ್ ಸ್ಪೈನಲ್ ಕಾರ್ಡ್), ಎದೆಗೂಡು ಭಾಗದ ಶ್ವಾಸಕೋಶದ ಆವರಣ (ಪದರ), ಶ್ವಾಸಕೋಶ (ಲಂಗ್ಸ್), ಹಾಗೂ ಉದರ ಭಾಗದ ಪಿತ್ತಜನಕಾಂಗ (ಲಿವರ್) ಗುಲ್ಮ (ಸ್ಪ್ಲಿನ್) ನಾಪತ್ತೆಯಾಗಿದ್ದವು. ಹೀಗಾಗಿ ಗಂಗಾಧರ ಸಾವಿನ ನಿಖರ ಕಾರಣ ತಿಳಿಸಲು ಆಗುವುದಿಲ್ಲ ಎಂದು ವರದಿ ನೀಡಿದೆ. ಯಾರ ಅನುಮತಿಯೂ ಇಲ್ಲದೇ ಶವದ ಅಂಗಾಂಗಗಳನ್ನು ತೆಗೆದುಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಗೆ ಕನ್ನಡಪ್ರಭ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರಿಂದ ಯಾವುದೇ ಉತ್ತರ ಸಿಗಲಿಲ್ಲ. ಅಪರಿಚಿತ ಶವದ ಅಂಗಾಂಗವನ್ನು ತೆಗೆದುಕೊಳ್ಳುವ ಹಕ್ಕು ಇಲ್ಲ. ಈ ಬಗ್ಗೆ ಆಸ್ಪತ್ರೆಗೆ ನೋಟಿಸ್ ನೀಡಿರುವುದಾಗಿ ಪೀಣ್ಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಿಂದ ಸಾವು? ಮೇ 25ರಂದು ಮಧ್ಯರಾತ್ರಿ 8ನೇ ಮೈಲಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಈ ವ್ಯಕ್ತಿ (ಗಂಗಾಧರ) ಮೃತಪಟ್ಟಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಶವವನ್ನು ಸಮೀಪದ ಸಪ್ತಗಿರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಸುಮಾರು ಒಂದು ವಾರ ಕಾಲ ಶವ ಇರಿಸಿ ವಾರಸುದಾರರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ, ವಾರಸುದಾರರು ಪತ್ತೆಯಾಗದ ಕಾರಣ ಸಪ್ತಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿಯಲ್ಲಿ ಅಪಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದರು. ಹೀಗಾಗಿ, ನಿಯಮದಂತೆ ಶವವನ್ನು ಯಶವಂತಪುರದ ಸುಬೇದಾರ್‍ಪಾಳ್ಯದ ಸ್ಮಶಾನದಲ್ಲಿ ಹೂಳಲಾಗಿತ್ತು ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ. ಆದರೆ, ಶವದ ಅಂಗಾಂಗಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿಲ್ಲ. ಅದಕ್ಕೆ ಅಧಿಕಾರವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಂಗಾಧರ ಸಾವಿನಕಾರಣ ಗೊತ್ತಾಗಬೇಕು
ಗಂಗಾಧರ ಸಾವಿನ ಕಾರಣ ತಿಳಿಯಬೇಕು. ಸಂಚಾರ ಪೊಲೀಸರು ಅಪಘಾತ ಎನ್ನುತ್ತಿದ್ದಾರೆ. ಶವದಲ್ಲಿ ಪ್ರಮುಖ ಅಂಗಾಂಗಗಳು ಇಲ್ಲದ ಕಾರಣ ಸಾವಿನ ನಿಖರ ಕಾರಣ ಹೇಳಲಾಗದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಶವಪರೀಕ್ಷೆ ನಡೆಸಿದ ಸಪ್ತಗಿರಿ ಆಸ್ಪತ್ರೆ ವೈದ್ಯರು ಅನುಮತಿ ಇಲ್ಲದೇ ಅಂಗಾಂಗಗಳನ್ನು ಎತ್ತಿಕೊಂಡಿದ್ದಾರೆ. ಕೇಳಿದರೆ, ಅವುಗಳನ್ನು ಮರಳಿ ಸುವುದಾಗಿ ಹೇಳುತ್ತಿದ್ದಾರೆ. ಅನುಮತಿ ಇಲ್ಲದೇ ಅವುಗಳನ್ನು ಕದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇವೆ ಎಂದು ಗಂಗಾಧರ ಸೋದರ ಮಾವ ನರಸಿಂಹಯ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com