ಎರಡನೇ ಪತ್ನಿ ಕೊಂದು ಹೂತಿದ್ದ ಆರೋಪಿ ಸೆರೆ

ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವ ಹೂತು ಹಾಕಿದ್ದ ಪತಿ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ...
ಎರಡನೇ ಪತ್ನಿ ಕೊಂದು ಹೂತಿದ್ದ ಆರೋಪಿ ಸೆರೆ (ಸಾಂದರ್ಭಿಕ ಚಿತ್ರ)
ಎರಡನೇ ಪತ್ನಿ ಕೊಂದು ಹೂತಿದ್ದ ಆರೋಪಿ ಸೆರೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವ ಹೂತು ಹಾಕಿದ್ದ ಪತಿ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರ ನಿವಾಸಿ ಇರ್ಫಾನ್ (26) ಹಾಗೂ ಆತನ ಸ್ನೇಹಿತ ಆರೀಫ್ (19) ಬಂಧಿತರು. ಆರೋಪಿ ಇರ್ಫಾನ್ ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ಆದರೆ ಮೊದಲನೇ ಪತ್ನಿಗೆ ತಿಳಿಸದೆ ಯಶವಂತಪುರ ವಾಸಿ ಸಲ್ಮಾ ಎಂಬಾಕೆಯನ್ನು ವಿವಾಹವಾಗಿದ್ದ ಆರೋಪಿ.ಜು.6ರಂದು ಆಕೆಯನ್ನು ಕೊಲೆ ಮಾಡಿ ಶವವನ್ನು ಹೊಸಕೋಟೆ ಸಮೀಪದ ಬೈಲ್ ನರಸೀಪುರ ಸಮೀಪದ ತಿಪ್ಪೆಗುಂಡಿಯಲ್ಲಿ ಹೂತು ಹಾಕಿ ಏನು ಅರಿಯದವನಂತೆ ಓಡಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳಿಗೆ ಸೀಟ್ ಕವರ್ ಹಾಕುವ ಕೆಲಸ ಮಾಡುತ್ತಿದ್ದ ಇರ್ಫಾನ್ ಗೆ ಕೆಲ ವರ್ಷಗಳ ಹಿಂದೆಯೇ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿ ಅತ್ತೆ ಮನೆಯಲ್ಲೇ ಪತ್ನಿ ಮಕ್ಕಳೊಂದಿಗೆ ವಾಸವಿದ್ದ, ಕೊಲೆಯಾದ  ಸಲ್ಮಾ ಯಶವಂತಪುರದಲ್ಲಿ ವಾಸವಿದ್ದು, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿದ್ದಳು. ಬ್ಯಾಂಕ್ ಗಳ ಪರವಾಗಿ ಸಾರ್ವಜನಿಕರಿಗೆ ಕರೆ ಮಾಡಿ ಸಾಲದ ಬಗ್ಗೆ ವಿವರ ನೀಡುತ್ತಿದ್ದಳು. ಅದೇ ರೀತಿ ಒಮ್ಮೆ ಇರ್ಫಾನ್ ಮೊಬೈಲ್ ಫೋನ್ ಗೆ ಕರೆ ಮಾಡಿ ಬ್ಯಾಂಕ್ ನಲ್ಲಿ ಸಾಲ ಬೇಕಾ ಎಂದು ಕೇಳಿದ್ದಾಳೆ. ಈ ವೇಳೆ ಇರ್ಫಾನ್ ಹಾಗೂ ಸಲ್ಮಾ ನಡುವೆ ಪರಿಚಯವಾಗಿತ್ತು. ಬಳಿಕ ಇಬ್ಬರು ಫೋನ್ ಮೂಲಕ ಮಾತನಾಡುತ್ತಾ ಸ್ನೇಹಿತರಾಗಿದ್ದರು. ಈ ವೇಳೆ ಆರೋಪಿ ಇರ್ಫಾನ್, ತನಿಗೆ ವಿವಾಹವಾಗಿರುವ ವಿಚಾರ ಮುಚ್ಚಿಟ್ಟು ಸಲ್ಮಾಳನ್ನು ಪ್ರೀತಿಸಿದ್ದಾನೆ. ತಾನು ಕಾಲು ಡೀಲರ್ ಆಗಿದ್ದು ಲಕ್ಷಾಂತರ ರುಪಾಯಿ ವ್ಯವಹಾರ ಮಾಡುವುದಾಗಿ ಸುಳ್ಳು ಹೇಳಿದ್ದ. ಇದನ್ನು ನಂಬಿದ ಸಲ್ಮಾ, ವಿವಾಹವಾಗಲು ನಿರ್ಧರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಹೈದ್ರಾಬಾದ್ ನಲ್ಲಿ ವಿವಾಹ

ಪ್ರೀತಿ ವಿಚಾರ ಪಾಲಕರಿಗೆ ತಿಳಿಸದೆ ಹೈದ್ರಾಬಾದ್ ಗೆ ತೆರಳಿ ಕೆಲ ತಿಂಗಳ ಹಿಂದೆ ಸಲ್ಮಾ, ಇರ್ಫಾನ್ ವಿವಾಹವಾಗಿದ್ದರು. ಬಳಿಕೆ ಇಬ್ಬರು ಬೆಂಗಳೂರಿಗೆ ಬಂದು ಸಿದ್ದಪುರದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಆದರೆ, ಕಲ ದಿನಗಳ ನಂತರ ಇರ್ಫಾನ್, ಹೊಸಗುಡ್ಡದ ಹಳ್ಳಿಯಲ್ಲಿರುವ ಮೊದಲ ಪತ್ನಿ ಮನೆಗೆ ಹೋಗಿ ಬರುವುದು ಮಾಡುತ್ತಿದ್ದ. ಈ ವಿಚಾರ ಸಲ್ಮಾಳಿಗೆ ಗೊತ್ತಾಗಿ ಗಲಾಟೆ ಮಾಡಿದ್ದಳು. ಕಾರು ಡೀಲರ್ ಎಂದು ಸುಳ್ಳು ಹೇಳಿದ್ದಲ್ಲದೇ ಆದಾಗಲೇ ಮದುವೆಯಾಗಿದ್ದಕ್ಕೆ ಕುಪಿತಗೊಂಡಿದ್ದಳು. ಮೊದಲನೇ ಹೆಂಡತಿ ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಮಾತ್ರ ಸಂಸಾರ ಮಾಡಬೇಕೆಂದು ಪಟ್ಟಿ ಹಿಡಿದಿದ್ದಳು. ಆದರೆ ತಾನು ಮೊದಲನೇ ಪತ್ನಿಯನ್ನು ತೊರೆಯುವುದಿಲ್ಲ ಎಂದು ಇರ್ಫಾನ್ ಹೇಳಿದ್ದ. ಇದರಿಂದ ಜಗಳ ಹೆಚ್ಚಾದಾಗ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಆದಕ್ಕಾಗಿ ಸ್ನೇಹಿತ ಆರೀಫ್ ನೆರವು ಪಡೆದುಕೊಂದ್ದ.

ಜು.6ರಂದು ಸಲ್ಮಾಳನ್ನು ಸ್ನೇಹಿತನೊಂದಿಗೆ ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಿ ಕರೆದೊಯ್ದ ಇರ್ಫಾನ್, ಚಲಿಸುವ ವ್ಯಾನ್ ನಲ್ಲೇ ವೇಲ್ ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ. ಕಾರಿನಲ್ಲೇ ಶವ ಹಾಕಿಕೊಂಡು ಬೂದಿಗೆರೆ, ಸೂಲಿಬೆಲೆ ಮುಂತಾದ ಪ್ರದೇಶಗಳಲ್ಲಿ ಸುತ್ತಾಡಿ ಶವ ಹೂತು ಹಾಕಲು ಯತ್ನಿಸಿದ್ದ. ಆದರೆ ಎಲ್ಲಿಯೂ ಜಾಗ ಸಿಗದಿದ್ದಾಗ ಅಂತಿವಾಗಿ ಹೊಸಕೋಟೆ ಸಮೀಪದ ಬೈಲ್ ನರಸೀಪುರಕ್ಕೆ ಶವ ತೆಗೆದುಕೊಂಡು ಹೋಗಿ ತಿಪ್ಪೆ ಗುಂಡಿಯೊಂದರಲ್ಲಿ ಶವವನ್ನು ಹೂತು ಹಾಕಿ ಪರಾರಿಯಾಗಿದ್ದ.

ಹೇಳದೆ ಕೇಳದೆ ಮನೆಯಿಂದ ಹೋಗಿದ್ದ ಸಲ್ಮಾ, ಹೈದ್ರಾಬಾದ್ ಗೆ ತೆರಳಿ ಮದುವೆಯಾಗಿರುವ ವಿಚಾರ ಪಾಲಕರಿಗೆ ಗೊತ್ತಾಗಿತ್ತು. ಸಿದ್ದಾಪುರದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಲ್ಮಾ ತಾಯಿ ಜೀನತ್ ವುನ್ನಿಸಾ ಅವರು ಮಗಳನ್ನು ಕಾಣಲು ಸಿದ್ದಾಪುರಕ್ಕೆ ಬಂದಿದ್ದರು. ಆದರೆ, ಮನೆಯಲ್ಲಿ ಮಗಳು ಕಾಣಿಸದಿದ್ದಾಗ ಅನುಮಾನಗೊಂಡು ಜು.22 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಆಕೆಯ ನಾಪತ್ತೆ ಹಿಂದೆ ಪತಿ ಇರ್ಫಾನ್ ಕೈವಾಡ ಇದೆ ಎಂದಿದ್ದರು.

ದೂರಿನ ಆಧಾರದ ಮೇಲೆ ಇರ್ಫಾನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಬಳಿಕ ಆರೀಫ್ ನನ್ನು ವಶಕ್ಕೆ ಪಡೆದ ಸಿದ್ದಾಪುರ ಪೊಲೀಸರು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಸಮಕ್ಷಮದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com